ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಪಲ್ಲಮಜಲು ಎಂಬಲ್ಲಿ ಅನಾರೋಗ್ಯ ಪೀಡಿತರಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ನಾಗರೀಕರು ಪ್ರತಿಭಟನೆ ನಡೆಸಿದ ಸಂದರ್ಭ ಸಮಸ್ಯೆ ಆಲಿಸಲು ಸ್ಥಳಕ್ಕೆ ಆಗಮಿಸಿದ್ದ ಪುರಸಭಾಧ್ಯಕ್ಷೆ ವಸಂತಿಯವರಿಗೆ ಕಪ್ಪು ಶಾಲು ಹಾಕಿ ಅವಮಾನಿಸಿರುವುದನ್ನು ಜಿಲ್ಲಾ ಯೋಜನಾ ಪ್ರಾಧಿಕಾರದ ನಿರ್ಧೇಶಕ, ಪುರಸಭಾ ಸದಸ್ಯ ವಾಸು ಪೂಜಾರಿ ತೀವ್ರವಾಗಿ ಖಂಡಿಸಿದ್ದಾರೆ.
ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಸಂವಿಧಾನವೇ ನಾಗರೀಕರಿಗೆ ನೀಡಿರುವ ಹಕ್ಕು. ಆದರೆ ಅದನ್ನೇ ನೆಪವಾಗಿರಿಸಿಕೊಂಡು ಪ್ರತಿಭಟನೆಯ ಅಹವಾಲು ಸ್ವೀಕರಿಸಲು ಸ್ಥಳಕ್ಕೆ ಆಗಮಿಸಿದ ಅಧ್ಯಕ್ಷರಿಗೆ ಕಪ್ಪು ಶಾಲು ತೊಡಿಸಿರುವುದು ಸರಿಯಲ್ಲ. ಇದು ಪುರಸಭೆಗೆ, ಪುರಸಭಾ ವ್ಯಾಪ್ತಿಯ ನಾಗರೀಕರಿಗೆ ಮಾಡಿದ ಅವಮಾನ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
