ಪುತ್ತೂರು: ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ನಿವಾಸಿಯಾದ ವ್ಯಕ್ತಿಯೊಬ್ಬರನ್ನು ಕುತ್ತಿಗೆಯ ಭಾಗಕ್ಕೆ ಕಡಿದು ಕೊಲೆ ಮಾಡಲಾಗಿದ್ದು, ಶವ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಸಮೀಪದ ತೊಟ್ಲ ಕಾಪಿನಡ್ಕ ಎಂಬಲ್ಲಿ ನಿನ್ನೆ ರಾತ್ರಿ ಪತ್ತೆಯಾಗಿದೆ. ಅಪರಿಚಿತ ಸ್ಥಿತಿಯಲ್ಲಿ ಬೆಳಕಿಗೆ ಬಂದಿದ್ದ ಮೃತನ ಗುರುತು ತಡರಾತ್ರಿಯ ವೇಳೆಗೆ ಗೊತ್ತಾಗಿದೆ. 
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆ ಸಮೀಪದ ನಿವಾಸಿ ನೀಲಯ್ಯ ಗೌಡ (43) ಕೊಲೆಯಾದ ವ್ಯಕ್ತಿ. ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದ ಆತನನ್ನು ಯಾರೋ ದುಷ್ಕರ್ಮಿಗಳು ಆ ನಿರ್ಜನ ಪ್ರದೇಶಕ್ಕೆ ಉಪಾಯದಿಂದ ಕರೆದುಕೊಂಡು ಹೋಗಿ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. 

puttur
ಒಳಮೊಗ್ರು ಗ್ರಾಮದ ಸಂಟ್ಯಾರು ಸಮೀಪದ ಕೈಕಾರ ಕಾಪಿನಡ್ಕ ರಸ್ತೆಯಲ್ಲಿ ಅಜ್ಜಿಕಲ್ಲು ಸಮೀಪದ ತೊಟ್ಲ ಎಂಬಲ್ಲಿ ರಸ್ತೆ ಬದಿಯಲ್ಲಿನ ಪೊದೆಯ ನಡುವೆ ನೀಲಯ್ಯ ಅವರ ಶವ ಪತ್ತೆಯಾಗಿದ್ದು, ಮುಖದ ಮತ್ತು ಕುತ್ತಿಗೆಯ ಭಾಗದಲ್ಲಿ ಕತ್ತಿಯಿಂದ ಕಡಿದ ರೀತಿಯ ಗಾಯಗಳಾಗಿದೆ. ಕುತ್ತಿಗೆಯ ಭಾಗಕ್ಕೆ ಕಡಿದ ಗಂಭೀರ ಏಟಿನಿಂದ ಆತ ಸ್ಥಳದಲ್ಲೇ ಮೃತಪಟ್ಟಿರಬಹುದೆಂದು ಅಭಿಪ್ರಾಯ ಪಡಿಸಲಾಗುತ್ತಿದೆ. ಆತನನ್ನು ಯಾರೋ ದುಷ್ಕರ್ಮಿಗಳು ಬೇರೆ ಕಡೆಯಲ್ಲಿ ಕೊಲೆಗೈದು ತಂದು ಇಲ್ಲಿ ಎಸೆದಿರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ತೊಟ್ಲ -ಕಾಪಿನಡ್ಕ ಸಮೀಪ ರಸ್ತೆ ಬದಿಯಿಂದ 5 ಮೀಟರ್ ಅಂತರದಲ್ಲಿರುವ ಪೊದೆಗಂಟಿಗಳ ನಡುವೆ ಶವ ಪತ್ತೆಯಾಗಿದ್ದು, ಕುತ್ತಿಗೆ ಮತ್ತು ಮುಖದ ಭಾಗದಲ್ಲಿ ಮಾತ್ರ ಗಾಯಗಳಾಗಿದ್ದು, ಆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಇದನ್ನು ಕಂಡ ಸ್ಥಳೀಯರೊಬ್ಬರು ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂಪ್ಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆ ಬಳಿಕವಷ್ಟೇ ಇದು ಕೊಲೆ ಎಂಬುವುದು ಸ್ಪಷ್ಟವಾಗಿದೆ. ಆತನನ್ನು ದ್ವೇಷದ ಹಿನ್ನಲೆಯಲ್ಲಿ ಕೊಲೆಗೈದಿರುವ ಸಾಧ್ಯತೆಯೇ ಅಧಿಕವಾಗಿದೆ. 
ನೈತಿಕತೆ ಇಲ್ಲದಾತ ರಸ್ತೆ ಬದಿ ಪ್ರಾಣ ಬಿಟ್ಟ…!!!
ಬಡ ಕುಟುಂಬದ ನೀಲಯ್ಯ ಗೌಡ ಮಧ್ಯವ್ಯಸನಿಯಾಗಿದ್ದು, ಬಹಳಷ್ಟು ಅಕ್ರಮ ವ್ಯವಹಾರಗಳಲ್ಲಿ ಭಾಗಿಯಾಗಿರುವ ಆರೋಪಗಳು ಆತನ ಮೇಲಿದೆ. ಕೆಲವು ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದಲ್ಲಿ ಪತ್ತೆಯಾಗಿದ್ದ ಹುಲಿ ಚರ್ಮ ಸಾಗಾಟ ಪ್ರಕರಣದಲ್ಲೂ ಆತ ಆರೋಪಿಯಾಗಿದ್ದ. ಹೆಣ್ಣು ಮಕ್ಕಳ ಹಿಂದೆ ಬೀಳುವ ಚಾಳಿಯೂ ಆತನಿಗಿತ್ತು ಎನ್ನಲಾಗಿದೆ. ಪೊಲೀಸರ ಮಾಹಿತಿದಾರನೆಂದು ಹೇಳಿಕೊಂಡು ತಿರುಗಾಡುತ್ತಿದ್ದ ಆತ ಊರಲ್ಲಿ ನಡೆಯುತ್ತಿದ್ದ ಕೆಲವೊಂದು     ಅಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಎಂಬ ಆರೋಪಗಳು ಕೂಡ ಈ ಹಿಂದೆ ಕೇಳಿ ಬಂದಿತ್ತು. ಅದಲ್ಲದೆ ಅಕ್ರಮ ಚಟುವಟಿಕೆಗಳ ಬ್ರೋಕರ್‍ಗಿರಿ ಮಾಡುತ್ತಿದ್ದ ಆತ ತನಗೆ ದಕ್ಕದ ಹೆಣ್ಣು ಮಕ್ಕಳ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸುತ್ತ ಅವರ ಹೆಸರಿಗೆ ಕಳಂಕ ತರುವ ಕೆಲಸವನ್ನು ಕೂಡ ಮಾಡುತ್ತಿದ್ದ ಎನ್ನಲಾಗಿದೆ. 
ಸದಾ ಕುಡಿದು ತೂರಾಡುತ್ತಿದ್ದ ಆತ ಸ್ಥಳೀಯವಾಗಿಯೂ ಕೆಲವರಲ್ಲಿ ಜಗಳವಾಡುತ್ತಾ ವೈರತ್ವ ಕಟ್ಟಿಕೊಂಡಿದ್ದ, ಹೆಣ್ಣು ಮಕ್ಕಳ ಮಕ್ಕಳ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದ, ಪರಿಸರದಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳ ಬಗ್ಗೆ ಡಂಗುರ ಸಾರುತ್ತಿದ್ದ, ಒಟ್ಟಿನಲ್ಲಿ ಊರಿಗೇ ಮಾರಿಯಾಗಿದ್ದ ಆತನನ್ನು ಯಾವುದೋ ಕಾರಣದ ದ್ವೇಷದ ಹಿನ್ನಲೆಯಲ್ಲಿ ಬಲ್ಲವರೇ ಕೊಲೆ ಮಾಡಿರುವ ಸಾಧ್ಯತೆ ಅಧಿಕವಾಗಿದೆ. ಆತನ ಪರಿಚಯಸ್ಥರೇ ಉಪಾಯದಿಂದ ಅಲ್ಲಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗುತ್ತಿದೆ. 

By suddi9

Leave a Reply

Your email address will not be published. Required fields are marked *