ಬೆಳ್ತಂಗಡಿ: ಸರಕಾರಿ ಬಸ್ ಮತ್ತು ಕಾರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಇನ್ನಿಬ್ಬರು ಗಂಭೀರ ಗಾಯ ಗೊಂಡ ಘಟನೆ ಗುರುವಾರ ಬೆಳಿಗ್ಗೆ ಧರ್ಮಸ್ಥಳ ಸಮೀಪ ಸಂಭವಿ ಸಿದೆ.
ಮೃತರನ್ನು ಬೆಂಗಳೂರು ಆರ್.ಟಿ.ನಗರ ಸಮೀಪದ ಜಯ ಮಹಲ್ ನಿವಾಸಿ ರಾಜಮ್ಮ (50) ಹಾಗೂ ಕಾರಿನ ಚಾಲಕ ಮಂಡ್ಯ ನಿವಾಸಿ ಪುನೀತ್(27) ಎಂದು ಗುರುತಿಸಲಾಗಿದೆ. ಬೆಂಗಳೂರು ನಿವಾಸಿಗಳಾದ ಪ್ರಶಾಂತ್(37) ಹಾಗೂ ಅವರ ಪತ್ನಿ ರಾಧಾ (32) ಎಂಬವರು ಗಂಭೀರವಾಗಿ ಗಾಯ ಗೊಂಡಿದ್ದು ಇವರ ಪುತ್ರಿ ಯಾಶಿಕಾ (3) ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾಳೆ.
ಗುರುವಾರ ಬಸ್ ಎಂದಿನ ಸಮಯಕ್ಕೆ ಹೊರಡದೆ ಹತ್ತು ನಿಮಿಷ ತಡವಾಗಿ ಧರ್ಮಸ್ಥಳದಿಂದ ಮೈಸೂ ರಿಗೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಧರ್ಮಸ್ಥಳ ಸಮೀಪದ ಕಲ್ಲೇರಿ ಬಳಿಯ ಏರು ರಸ್ತೆಯಲ್ಲಿ ಬೆಂಗಳೂ ರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಅತಿಯಾದ ವೇಗದಲ್ಲಿ ಬರುತ್ತಿದ್ದ ಬಸ್ ರಾಂಗ್ ಸೈಡ್‍ನಿಂದ ಮುನ್ನುಗ್ಗಿ ಎದು ರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆ ದಿದೆ. ಅಪಘಾತದಲ್ಲಿ ಬಸ್ ಕಾರನ್ನು ಅನತಿದೂರದವರೆಗೆ ಎಳೆದು ಕೊಂಡು ಹೋದ ಪರಿಣಾಮವಾಗಿ ಕಾರು ಬಸ್‍ನ ಅಡಿಗೆ ಸಿಲುಕಿಕೊಂಡಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಬಸ್‍ನ ಚಕ್ರಗಳು ಸ್ಫೋಟಗೊಂಡಿವೆ.
ಕಾರಿನಲ್ಲಿದ್ದವರು ಒಂದೇ ಕುಟುಂಬದವರಾಗಿದ್ದು ಮೃತ ರಾಜಮ್ಮ ಪ್ರಶಾಂತ್ ಅವರ ತಾಯಿ. ಚಾಲಕನೂ ಇವರ ಕುಟುಂಬವದರೇ ಆಗಿದ್ದಾರೆ. ಐದೂ ಮಂದಿ ಧರ್ಮಸ್ಥಳಕ್ಕೆ ಭೇಟಿ ನೀಡುವ ಸಲುವಾಗಿ ಆಗಮಿಸುತ್ತಿದ್ದರು. ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಇತರೆ ವಾಹನಗಳ ಚಾಲಕರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಅದಾಗಲೇ ಇಬ್ಬರು ಮೃತಪಟ್ಟಿದ್ದರು. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಬಸ್ ಚಾಲಕ ಹನುಮಂತ ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.
ಯಮದೂತರಾಗುತ್ತಿರುವ ಬಸ್‍ಗಳು
ಸರಕಾರಿ ಬಸ್‍ಗಳ ಅತಿವೇಗದ ಚಾಲನೆಯಿಂದ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು ಕಳೆದ ಕೆಲ ತಿಂಗಳಲ್ಲಿ ಹಲವರನ್ನು ಬಲಿ ಪಡೆದಿದೆ. ತಿಂಗಳ ಹಿಂದೆಯೆಷ್ಟೆ ಬೆಳ್ತಂಗಡಿಯ ಸ್ಪುಡಿಯೋವೊಂದರ ಮಾಲಕ ಜಗದೀಶ್ ಮೃತಪಟ್ಟಿದ್ದರೆ, ಧರ್ಮಸ್ಥಳದಲ್ಲಿ ಬೈಕ್ ಸವಾರರೊಬ್ಬರು ಬಸ್‍ನಡಿಗೆ ಸಿಲುಕಿ ಮೃತಪಟ್ಟಿದ್ದರು. ವೇಗದ ಚಾಲನೆಯೇ ಈ ಎಲ್ಲಾ ಅಪಘಾತಗಳಿಗೆ ಕಾರಣವೆನ್ನಲಾಗುತ್ತಿದ್ದು ಬಸ್ ವೇಗಮಿತಿ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಪವಾಡ ಸದೃಶ ಬದುಕುಳಿದ ಮಗು: ಕಾರಿನ ಹಿಂದಿನ ಆಸನದಲ್ಲಿ ತಂದೆ ತಾಯಿಯೊಂದಿಗೆ ಇದ್ದ ಮಗು ಯಾವುದೇ ಗಾಯಗಳಿಲ್ಲದೆ ಪಾರಾಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಛಾವಣಿ ಕಿತ್ತು ಹೋಗಿದೆ. ಕಾರಿನ ಮುಂದಿನ ಸೀಟುಗಳು ದಂಪತಿಗಳ ಕಾಲುಗಳು ನುಜ್ಜುಗುಜ್ಜಾಗಿವೆ. ಇದರಿಂದ ಮಧ್ಯದಲ್ಲಿದ್ದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಮಗುವನ್ನು ಉಜಿರೆಯ ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ.





