ಮುಂಬಯಿ: ಗುಜರಾತ್ ಭೂಮಿಯು ಸಾಮಾನ್ಯ ಮಣ್ಣಲ್ಲ. ಇದು ದೇಶವನ್ನು ಮುನ್ನಡೆಸಿದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ನರೇಂದ್ರ ಮೋದಿ ಅವರಂತಹ ಮಹಾನ್ ನಾಯಕರನ್ನು ದೇಶಕ್ಕೆ ನೀಡಿದ ಪುಣ್ಯಭೂಮಿಯಾಗಿದೆ. ಅಖಂಡತೆ, ಏಕತೆ ಹಾಗೂ ರಾಷ್ಟ್ರೀಯತೆಯ ಸಂದೇಶವನ್ನು ಸಾರಿದ ಈ ನಾಡಿನಲ್ಲಿ ನಮ್ಮ ಬಂಟರ ಸಾಧನೆಯೂ ಶ್ಲಾಘನೀಯವಾಗಿದೆ.

ಸುಮಾರು ಮೂರೂವರೆ ದಶಕಗಳ ಹಿಂದೆ ಗುಜರಾತ್‌ನಲ್ಲಿ ನೆಲೆಸಿದ ಬಂಟರು ದೂರದೃಷ್ಟಿಯ ಚಿಂತನೆ, ಸಂಘಟನಾ ಶಕ್ತಿ ಹಾಗೂ ಸಮಾಜಮುಖಿ ಕಾರ್ಯಗಳಿಂದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಆದ್ದರಿಂದ ಅಹಮದಾಬಾದ್‌ನ ಬಂಟರು ಇಂದು ಆಪದ್ಬಾಂಧವರಾಗಿ, ಅನೇಕರಿಗೆ ಆಶಾಕಿರಣವಾಗಿ ಗುರುತಿಸಿಕೊಂಡಿದ್ದಾರೆ. ಸಮಾಜಮುಖಿ ಚಿಂತನೆ ಹಾಗೂ ಸೇವಾ ಮನೋಭಾವದೊಂದಿಗೆ ಮುನ್ನಡೆಯುತ್ತಿರುವ ನಮ್ಮ ಬಂಟರು ಇಂದು ಜಾಗತಿಕ ಮಟ್ಟದಲ್ಲಿ ಸಾಧಕರಾಗಿ ಹೊರಹೊಮ್ಮಿದ್ದಾರೆ. ಇಂತಹ ಸಾಧನೆಗಳು ಮುಂದಿನ ಪೀಳಿಗೆಯ ಮಕ್ಕಳಲ್ಲಿ ಹಾಗೂ ಯುವಜನತೆಯಲ್ಲಿ ಸ್ವಸಮುದಾಯದ ಬಗ್ಗೆ ಅಭಿಮಾನ, ಆಸಕ್ತಿ ಮತ್ತು ಒಗ್ಗಟ್ಟಿನ ಮನೋಭಾವವನ್ನು ಬೆಳೆಸುವಂತಾಗಬೇಕು.

ಈ ನಿಟ್ಟಿನಲ್ಲಿ ಸಮುದಾಯ ಸಂಘಟನೆಗಳು ಮಹತ್ವದ ಪಾತ್ರ ವಹಿಸಿ, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಸಂಘಟನೆಯನ್ನು ಉಳಿಸಿ ಬೆಳೆಸುವ ಮೂಲಕ ಬಂಟ ಸಮುದಾಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಕೈಜೋಡಿಸಬೇಕಾಗಿದೆ ಎಂದು ರಾಯಲ್ ಸಿಂಫನಿ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‌ನ ಪ್ರವರ್ತಕ,  ಪುಣೆ ಬಂಟ್ಸ್ ಸಂಘದ ಅಧ್ಯಕ್ಷ ಕೆಂಜಾರುಗುತ್ತು ಅಜಿತ್ ಹೆಗ್ಡೆ ನುಡಿದರು.

ಗುಜರಾತ್ ರಾಜ್ಯದಲ್ಲಿನ ಬಂಟ್ಸ್ ಸಂಘ ಸಂಸ್ಥೆಯು ಅಹಮದಾಬಾದ್ (ರಿ.) ಗುಜರಾತ್ ಸಂಸ್ಥೆಯು ತನ್ನ ಮೂವತ್ತ ಮೂರನೇ ಸೇವಾ ಸಂಭ್ರಮವನ್ನಾಗಿಸಿ ತ್ರಯೋದಶತ್ರಿಮಂಶೋತ್ಸವವನ್ನು (೩೩ನೇ ವಾರ್ಷಿಕೋತ್ಸವ) ಇಂದಿಲ್ಲಿ ಭಾನುವಾರ ಸಂಜೆ ಗುಜರಾತ್ ಅಹಮದಾಬಾದ್‌ನ ಶಾಹೀಬಾಗ್‌ನಲ್ಲಿರುವ ಸರ್ದಾರ್ ಪಟೇಲ್ ಸಮುದಾಯ ಸಭಾಗೃಹದಲ್ಲಿ ಬಿಎಸ್‌ಎ ಅಧ್ಯಕ್ಷ ನಿತೇಶ್ ಎಸ್.ಶೆಟ್ಟಿ ಶಿರ್ವಾಕೋಡು ಅಧ್ಯಕ್ಷತೆಯಲ್ಲಿ ಸಂಭ್ರಮಿಸಿದ್ದು ಮುಖ್ಯ ಅತಿಥಿಯಾಗಿದ್ದ ಅಜಿತ್ ಹೆಗ್ಡೆ ದೀಪಹಚ್ಚಿ ಸಮಾರಂಭಮಕ್ಕೆ ಚಾಲನೆಯನ್ನೀಡಿ ಮಾತನಾಡಿದರು.

ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲ್ಪಟ್ಟ ಸಮಾರಂಭದಲ್ಲಿ ಲೈಫ್‌ಸ್ಟೈಲ್ ಡಿಸಾರ್ಡರ್ ಕನ್ಸಲ್ಟೆಂಟ್‌ನ ಮುಖ್ಯಸ್ಥ, ಆಯುರ್ವೇದ ವೈದ್ಯ ಡಾ| ಚಂದ್ರಮೋಹನ್ ಶೆಟ್ಟಿ ಹಾಗೂ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ಕಲಾ ಸಂಗಮ ಇದರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ವಿಶೇಷ ಆಹ್ವಾನಿತರಾಗಿ, ಅಂಕೇಶ್ವರ ತುಳು ಸಂಘದ ಅಧ್ಯಕ್ಷ ಶಂಕರ ಶೆಟ್ಟಿ ಸೂರತ್, ರಾಧಾಕೃಷ್ಣ ಗ್ರೂಪ್ ಆಫ್ ಹೋಟೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಸಮಾಜದ ಅಧ್ಯಕ್ಷ ರಾಧಾಕೃಷ್ಣ ಟಿ.ಶೆಟ್ಟಿ ಮತ್ತು ತುಳುನಾಡ ಐಸಿರಿ ವಾಪಿ ಅಧ್ಯಕ್ಷ ನವೀನ್ ಶೆಟ್ಟಿ ಹೇರೂರು ಗೌರವಾನ್ವಿತ ಅತಿಥಿಗಳಾಗಿ ಹಾಗೂ ಬಿಎಸ್‌ಎ ಕಾರ್ಯದರ್ಶಿ ಕಿರಣ್ ಶೆಟ್ಟಿ ವಾಮಂಜೂರು, ಕೋಶಾಧಿಕಾರಿ ಪ್ರಶಾಂತ್ ನಾಕ್ ವೇದಿಕೆಯನ್ನಲಂಕರಿಸಿದ್ದರು.

ಡಾ| ಚಂದ್ರಮೋಹನ್ ಮಾತನಾಡಿ ಕಾರ್ಯಕ್ರಮದ ಆಯೋಜನೆ ಹಾಗೂ ಸಂಘಟನೆಯ ಕಾರ್ಯವೈಖರಿ ಅಭಿನಂದನೀಯವಾಗಿದೆ. ಇದು ಬಂಟರ ಸಂಘದ ಸಾಮರಸ್ಯ, ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಸಂಘದ ಈ ಅತ್ಯುತ್ತಮ ಕಾರ್ಯವನ್ನು ಎಲ್ಲರೂ ಮುಕ್ತಕಂಠದಿಂದ ಅಭಿನಂದಿಸಬೇಕಾಗಿದೆ ಎಂದರು. ಆರೋಗ್ಯ ಕಾಳಜಿಯ ಬಗ್ಗೆ ಪ್ರಸ್ತುತಿಗೈದ ಡಾ| ಚಂದ್ರಶೇಖರ್ ಪ್ರತಿಯೋರ್ವರೂ ಸ್ವಯಂ ಪ್ರೇರಿತರಾಗಿ ಸ್ವಾಸ್ಥ  ಕಾಪಾಡಿ ಬಾಳುವುದಕ್ಕೆ ಸಲಹಿಸಿದರು.

ತುಳುರಂಗ ಭೂಮಿಯಲ್ಲಿ ಸಿನೆಮಾದಂತೆಯೇ ಕ್ರಾಂತಿ ಆಗಿದೆ, ಆದರಲ್ಲೂ ಕಲಾಸಂಗಮ ತಂಡ ನಾಟಕ ರಂಗದ ಮೂಲಕ ದಾಖಲೆಯ ಸಾಧನೆಗೈದಿದೆ. ಈ ಯಶಸ್ವಿನ ಹಿಂದೆ ರಂಗಕರ್ಮಿಗಳ ಮತ್ತು ಕಲಾಭಿಮಾನಿಗಳ ಪ್ರೋತ್ಸಾಹವೇ ಶಕ್ತಿ ತುಂಬಿದೆ. ತಂಡದ ಸಾಧನೆಗೆ ಇಲ್ಲಿನ ಪ್ರದರ್ಶನವೇ ಸಾಕ್ಷಿಯಾಗಿವೆ ಎಂದು ವಿಜಯಕುಮಾರ್ ಕೊಡಿಯಾಲ್‌ಬೈಲ್ ತಿಳಿಸಿದರು.

ಬದುಕಿನಲ್ಲಿ ಸಾಧಿಸುವ ಛಲ ಮತ್ತು ಧೈರ್ಯವಿದ್ದರೆ ಯಶಸ್ಸು ಸುಲಭವಾಗಿ ಸಾಧ್ಯ. ಅಹಮದಾಬಾದ್ ಬಂಟರ ಸಂಘ ನಮಗೆ ತವರು ಮನೆಯಿದ್ದಂತೆ. ಇಲ್ಲಿನ ಸಾಮರಸ್ಯದ ವಾತಾವರಣ ಸಹಜವಾಗಿಯೇ ಎಲ್ಲರನ್ನೂ ಆಕರ್ಷಿಸುತ್ತದೆ. ಬಂಟರು ಛಲವಾದಿಗಳು, ಉನ್ನತ ವ್ಯಕ್ತಿತ್ವದವರು ಹಾU  ಗತ್ತು-ಗುತ್ತಿನಉತ್ತಮ ಮನೆತನದವರು. ಬಂಟರು ಇಲ್ಲದ ಕ್ಷೇತ್ರಗಳೇ ಇಲ್ಲ. ಆದುದರಿಂದ ವಿಶ್ವಾಸಾರ್ಹತೆಗೆ ಬಂಟರು ಹೆಸರುವಾಸಿಯಾಗಿದ್ದಾರೆ. ಕಠಿಣ ಪರಿಶ್ರಮದಿಂದ ಸಾಧನೆಯ ಶಿಖರವೇರಿದ ಬಂಟರು ಸಮಾಜದ ಪ್ರಗತಿಪರ ಶಕ್ತಿಯಾಗಿದ್ದಾರೆ ಎಂದು ರಾಧಾಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟರು.

ನವೀನ್ ಶೆಟ್ಟಿ ಹೇರೂರು ಮಾತನಾಡಿ ಒಂದು ಸಂಘವೆಂದರೆ ಅದು ಕೇವಲ ಸಂಘಟನೆಯಲ್ಲ, ಕೂಡು ಕುಟುಂಬದಂತಿರುವ ಆತ್ಮೀಯ ಪರಿವಾರವಾಗಿದೆ. ಸಂಪನ್ನ ಸಂಸ್ಕೃತಿ, ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಾಮರಸ್ಯದಿಂದ ಕೂಡಿದ ಬಂಟರ ಈ ಪರಿವಾರದಲ್ಲಿ ಒಂದಾಗುವುದೇ ಹೆಮ್ಮೆಯ ಸಂಗತಿ. ಇಂತಹ ಸಂಘದೊಂದಿಗೆ ಬೆರೆಯುವುದು ಪ್ರತಿಯೊಬ್ಬರಿಗೂ ಅಭಿಮಾನದ ವಿಷಯವಾಗಿದೆ ಎಂದರು.

ಆಸಕ್ತಿ, ಅಭಿರುಚಿ ಹಾಗೂ ಐಕ್ಯತಾಭಾವ ಇತ್ಯಾದಿಗಳಿದ್ದರೆ ಮಾತ್ರ ಸಾಂಘಿಕ ಮುನ್ನಡೆ ಸುಲಭವಾಗುವುದು. ಸಂಘಟನೆಯ ಮೂಲಕ ಸಮುದಾಯವನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೊರನಾಡಿನಲ್ಲೂ ನಾವು  ಸಮುದಾಯದ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಕಾರ್ಯವನ್ನು ನಾವು ನಿರಂತರವಾಗಿ ಮಾಡುತ್ತಿದ್ದೇವೆ. ಸದಸ್ಯರು ಸಕ್ರೀಯರಾಗಿ ಸಾಥ್ ನೀಡಿದ್ದಲ್ಲಿ ಇನ್ನಷ್ಟು ಉತ್ಸುಕರಾಗಿ ಸಂಘವನ್ನು ಮುನ್ನಡೆಸಲು ಹಸನಾಗುವುದು ಎಂದು ಅಧ್ಯಕ್ಷೀಯ ಭಾಷ್ಣವನ್ನುದ್ದೇಶಿಸಿ ನಿತೇಶ್ ಶೆಟ್ಟಿ ತಿಳಿಸಿದರು.

ಸಾಂಸ್ಕೃತಿಕ ಉತ್ಸವದ ಆಕರ್ಷಣೆಯಾಗಿ ಮಧ್ಯಾಹ್ನ ಅಹಮದಾಬಾದ್ ಬಂಟ್ಸ್ ಸಂಘದ ಸದಸ್ಯರು, ಮಕ್ಕಳು, ಮಹಿಳೆಯರು ಸಾಂಸ್ಕೃತಿಕ ವೈಧ್ಯತೆಗಳನ್ನು ಪ್ರಸ್ತುತ ಪಡಿಸಿದರು ಹಾಗೂ ನಾಡಿನ ಪ್ರತಿಷ್ಠಿತ ಮತ್ತು ಪ್ರಶಸ್ತಿ ವಿಜೇತ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್‌ಬೈಲ್ ರಚನೆ ಮತ್ತು ನಿರ್ದೇಶನದಲ್ಲಿ ಕಲಾ ಸಂಗಮ ಕಲಾವಿದರು ತುಳುನಾಡಿನ ದೈವಿಕ ಹಾಗೂ ರಕ್ಷಕ ಶಕ್ತಿಯಾದ ಗುಳಿಗೆ ದೈವದ ಹಿನ್ನೆಲೆಯಲ್ಲಿ ಮೂಡಿಬಂದ ಗಿನ್ನೆಸ್ ವಿಶ್ವ ದಾಖಲೆಯ ಸಿದ್ಧತೆಯ ‘ಶಿವದೂತೆ ಗುಳಿಗೆ’ ತುಳು ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಬಿಎಸ್‌ಎ ಸಂಘದ ಶಾಶ್ವತ ಆಹ್ವಾನಿತರುಗಳಾದ ಅಜೆಕಾರು ಸಂಜೀವ ಶೆಟ್ಟಿ (ಬಿಎಸ್‌ಎ ಸ್ಥಾಪಕ ಅಧ್ಯಕ್ಷ), ಮಾಜಿ ಅಧ್ಯಕ್ಷರುಗಳಾದ ದೇವದತ್ತ ಎನ್.ಶೆಟ್ಟಿ, ಸುಧಾಕರ ಎಸ್.ಶೆಟ್ಟಿ, ಅಪ್ಪು ಪಿ.ಶೆಟ್ಟಿ, ಸಂಘದ ವಿಶೇಷ ಆಹ್ವಾನಿತರುಗಳಾದ ಪುರುಷೋತ್ತಮ ಶೆಟ್ಟಿ, ಜಗನ್ನಾಥ ಪಿ.ಶೆಟ್ಟಿ, ಆಶಿಶ್ ಶೆಟ್ಟಿ, ಹರೀಶ್ ಶೆಟ್ಟಿ, ಸಂಘದ ಉಪಾಧ್ಯಕ್ಷೆ ಶಕುಂತಳಾ ಐ.ಶೆಟ್ಟಿ, ಜೊತೆ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಜೊತೆ ಕೋಶಾಧಿಕಾರಿ ದೇವಿಪ್ರಸಾದ್ ಡಿ.ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುರೇಶ್ ಎನ್.ಶೆಟ್ಟಿ, ಅಪ್ಪು ಎ.ಶೆಟ್ಟಿ, ಚಂದ್ರಶೇಖರ್ ಕೆ.ಶೆಟ್ಟಿ, ವಿವೇಕ್ ಶೆಟ್ಟಿ, ಸರೋಜಾ ಎಸ್.ಶೆಟ್ಟಿ, ಪ್ರಕಾಶ್ ಬಿ.ಶೆಟ್ಟಿ, ಅಶೋಕ್ ಎಲ್.ಶೆಟ್ಟಿ, ಸುರೇಶ್ ಎಸ್.ಶೆಟ್ಟಿ, ಪ್ರಶಾಂತ್ ಎಸ್.ಶೆಟ್ಟಿ, ಸುದರ್ಶನ್ ಡಿ.ಶೆಟ್ಟಿ, ದಿನೇಶ್ ಎಸ್.ಶೆಟ್ಟಿ, ಮನೋಜ್ ಎಸ್.ಶೆಟ್ಟಿ ಸೇರಿದಂತೆ ಸದಸ್ಯರನೇಕರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಶಮ್ಮಿ ಅಜಿತ್ ಹೆಗ್ಡೆ, ದಿವ್ಯಾ ಚಂದ್ರಮೋಹನ್ ಶೆಟ್ಟಿ, ಪ್ರೇಮಾ ಶಂಕರ ಶೆಟ್ಟಿ, ರೂಪ ವಿಜಯಕುಮಾರ್ ಶೆಟ್ಟಿ, ಜಯಲಕ್ಷಿ  ಎಸ್.ಶೆಟ್ಟಿ ಶಿರ್ವಾಕೋಡು, ಸಂಘಟಕ ಪ್ರಕಾಶ್ ಶೆಟ್ಟಿ ಸುರತ್ಕಲ್, ನಿಯತ್ ಎಸ್.ಶೆಟ್ಟಿ, ದಿಶಾ ನಿತೇಶ್ ಶೆಟ್ಟಿ, ದಿವ್ಯಾ ಕಿರಣ್ ಶೆಟ್ಟಿ, ಜಿಗ್ನಾ ಪಿ.ನಾಕ್ ಮತ್ತಿತರರು ಉಪಸ್ಥಿತರಿದ್ದು ಕಾರ್ಯಕಾರಿ ಸಮಿತಿ ಸಕ್ರೀಯ ಸದಸ್ಯ ಪೆರ್ಮುದೆ ಪರೇಲಗುತ್ತು ಸುರೇಶ್ ಶೆಟ್ಟಿ ಮತ್ತು ವಿದ್ಯಾ ಎಸ್.ಶೆಟ್ಟಿ ದಂಪತಿಯನ್ನು ವಿಶೇಷವಾಗಿ ಗೌರವಿಸಲಾಯಿತು. ಹಾಗೂ ಸ್ಪರ್ಧಾ ವಿಜೇತರು, ಪ್ರತಿಭಾನ್ವಿತರಿಗೆ, ನವ ದಂಪತಿಗಳು,  ಕೊಡುಗೈ ದಾನಿಗಳನ್ನೂ ಅತಿಥಿಗಳು ಸತ್ಕರಿಸಿ ಗೌರವಿಸಿದರು.

By Suddi9