ಬಂಟ್ವಾಳ: ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಬಂಟ್ವಾಳ ತಾ.ಪಂ.ವಾಣಿಜ್ಯ ಸಂಕೀರ್ಣ ಕಟ್ಟಡದ ಕೊಠಡಿಯ ಹರಾಜು ಪ್ರಕ್ರಿಯೆಗೆ ರಾಜ್ಯ ಉಚ್ಚ ನ್ಯಾಯಾಲಯವು ಬಾಡಿಗೆದಾರರ ವಿರುದ್ದ ತೀವ್ರತರವಾದ ಕ್ರಮಕೈಗೊಳ್ಳದಂತೆ ತಾ.ಪಂ.ಆಡಳಿತಕ್ಕೆ ತಡೆಯಾಜ್ಞೆ ನೀಡಿ ಆದೇಶಿಸಿದೆ.

2026 ರ ಆಗಸ್ಟ್ ೩೦ ರಂದು ಸ್ಥಳೀಯ ಪತ್ರಿಕೆಯೊಂದರಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣ ಕಟ್ಟಡದ ೧೨ ವಿವಿಧ ವ್ಯಾಪಾರ, ವ್ಯವಹಾರ ಕೋಣೆಗಳ ಹರಾಜು ಪ್ರಕ್ರಿಯೆಯನ್ನು ನಡೆಸುವುದಾಗಿ ಪ್ರಕಟಿಸಿತ್ತು.
ಈ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ೧೨ ರಿಂದ ೧೩ ಬಾಡಿಗೆ ಕೋಣೆಗಳಲ್ಲಿ ಬಾಡಿಗೆಗೆ ವಹಿಸಿಕೊಂಡವರು ತಮ್ಮ ವ್ಯವಹಾರಗಳನ್ನು ನಡೆಸಿಕೊಂಡು ಕಳೆದ ೩೦ ಕ್ಕೂ ಹೆಚ್ಚು ವರ್ಷಗಳಿಂದ ಪರಿಸರದಲ್ಲಿ ತಮ್ಮ ವ್ಯವಹಾರದಲ್ಲಿ ಹೆಸರನ್ನು ಗಳಿಸಿದ್ದಾರಲ್ಲದೇ ತಮ್ಮ ಬಾಡಿಗೆಗೆ ವಹಿಸಿಕೊಂಡ ಕೋಣೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವ್ಯವಹಾರಕ್ಕೆ ಅನುಗುಣವಾಗಿ ಪರಿವರ್ತನೆಗೊಳಿಸಿಕೊಂಡಿರುತ್ತಾರೆ.
ಬಂಟ್ವಾಳ ತಾ.ಪಂ.ನ ಪತ್ರಿಕಾ ಪ್ರಕಟಣೆಯ ಕಾರಣದಿಂದಾಗಿ ತಮ್ಮ,ತಮ್ಮ ವ್ಯವಹಾರ ಮಾಡುತ್ತಿರುವ ಅಂಗಡಿ ಮತ್ತು ವ್ಯವಹಾರ ಕೋಣೆಗಳು ಹರಾಜು ಪ್ರಕ್ರಿಯೆಗೆ ಒಳಪಟ್ಟಲ್ಲಿ ತೊಂದರೆಗೊಳಗಾಗುವ ಸಾಧ್ಯತೆಯ ಹಿನ್ನಲೆಯಲ್ಲಿ ಪತ್ರಿಕಾ ಪ್ರಕಟಣೆ ಮತ್ತು ಏಲಂ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಬಾಡಿಗೆದಾರರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ಈ ರಿಟ್ ಅರ್ಜಿಯ ಪ್ರಾಥಮಿಕ ತನಿಖೆ ನಡೆಸಿದ ನ್ಯಾಯಾಲಯವು ಬಾಡಿಗೆದಾರರ ವಿರುದ್ಧ ತೀವ್ರತರವಾದ ಕ್ರಮವನ್ನು ಕೈಗೊಳ್ಳದಂತೆ ಪ್ರಾಥಮಿಕ ತಡೆಯಾಜ್ಞೆಯನ್ನು ನೀಡಿದೆ.
ಬುಧವಾರ ತಾ.ಪಂ.ವಾಣಿಜ್ಯ ಸಂಕೀರ್ಣದ ಬಾಡಿಗೆದಾರರ ನಿಯೋಗ ನ್ಯಾಯಾಲಯದ ಆದೇಶದ ಪ್ರತಿಯನ್ನು ತಾಲೂಕು ಪಂಚಾಯತ್ ಆಡಳಿತಾಧಿಕಾರಿಯವರಿಗೆ ಸಲ್ಲಿಸಿ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಆಗ್ರಹಿಸಿತು .
ಮುಂದೂಡಿಕೆ:
ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ನಿಗದಿಯಾಗಿದ್ದ ತಾ.ಪಂ.ನ ವಾಣಿಜ್ಯ ಸಂಕೀರ್ಣದ ಕೊಠಡಿಗಳ ಏಲಂ ಪ್ರಕ್ರಿಯೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ತಾ.ಪಂ.ವ್ಯವಸ್ಥಾಪಕರು ತಿಳಿಸಿದ್ದಾರೆ.
