ಬಂಟ್ವಾಳ:ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಂಗಳೂರಿನ ಉರ್ವಸ್ಟೋರ್ ಗಣಪತಿ ದೇವಸ್ಥಾನದ ರಸ್ತೆಯಲ್ಲಿರುವ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ “ಶ್ರೀಕೃಷ್ಣ ವೇಷ ಸ್ಪರ್ಧೆ”ಯನ್ನು ನಡೆಸಲಾಯಿತು.
ಮಕ್ಕಳು ಶ್ರೀಕೃಷ್ಣನ ವಿವಿಧ ರೂಪಗಳಲ್ಲಿ ಸುಂದರವಾಗಿ ವೇಷಧರಿಸಿ, ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಪ್ರದರ್ಶಿಸಿದರು.

ಮುದ್ದು ಕೃಷ್ಣ – 2ರಿಂದ 4 ವರ್ಷ, ಬಾಲ ಕೃಷ್ಣ – 5ರಿಂದ 7 ವರ್ಷ ಹಾಗೂ ಕಿಶೋರ ಕೃಷ್ಣ – 8ರಿಂದ 10 ವರ್ಷ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆಯನ್ನು ನಡೆಸಲಾಯಿತು.
ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನಿತ್ತು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ನಕುಲ ಕೃಷ್ಣ ದಾಸ್, ಇಂದಿರಾಕ್ಷಿ ಐ. ಶೆಟ್ಟಿ,ನಳಿನಿ ಶೆಟ್ಟಿ, ಯೋಗೇಶ್ ಪೂಜಾರಿ ಸಹಿತ ಹಲವಾರು ಗಣ್ಯರು ಹಾಜರಿದ್ದರು.
“ಕೃಷ್ಣನನ್ನು ಕೇವಲ ವೇಷದಲ್ಲಿ ಅಲ್ಲ, ಗುಣಗಳಲ್ಲಿ ಕಾಣೋಣ” – ಬಿ.ಕೆ. ವಿಶ್ವೇಶ್ವರಿ
ಈ ಸಂದರ್ಭಶ್ರೀಕೃಷ್ಣಾಷ್ಟಮಿಯ ಸಂದೇಶ ನೀಡಿದಬ್ರಹ್ಮಾಕುಮಾರಿ ಬಿ.ಕೆ. ವಿಶ್ವೇಶ್ವರಿ ಅವರು “ಶ್ರೀಕೃಷ್ಣ ಎಂದರೆ ಕೇವಲ ಒಂದು ಸುಂದರ ವೇಷವಲ್ಲ; ಅವರು ಪಾವಿತ್ರ್ಯ, ಪ್ರೀತಿ, ಶಾಂತಿ, ಸತ್ಯತೆ ಮತ್ತು ದೈವಿಕ ಗುಣಗಳ ಪ್ರತೀಕ. ಮಕ್ಕಳು ಕೃಷ್ಣನ ವೇಷ ಧರಿಸುವುದರ ಜೊತೆಗೆ ಅವರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
