ಬಂಟ್ವಾಳ:ತುಳು ಭಾಷೆಯ ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಮಹತ್ವವನ್ನು ಪರಿಗಣಿಸಿ ತುಳು ಭಾಷೆಯನ್ನು ಭಾರತದ ಸಂವಿಧಾನದ 8 ನೇ ಪರಿಚ್ಚೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ಒತ್ತಾಯಿಸಿದ್ದಾರೆ.

ತುಳು ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ತುಳುನಾಡಿನ ಜನರು, ಸಾಹಿತಿಗಳು, ಭಾಷಾ ಹೋರಾಟಗಾರರು ಮತ್ತು ವಿವಿಧ ಸಂಘ ಸಂಸ್ಥೆಗಳು ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಬರುತ್ತಿವೆ. ಸಂಸತ್ತಿನಲ್ಲಿಯೂ ಹಲವು ಸಂದರ್ಭಗಳಲ್ಲಿ ತುಳು ಭಾಷೆಗೆ ಸಂವಿಧಾನಾತ್ಮಕ ಮಾನ್ಯತೆ ನೀಡುವಂತೆ ಒತ್ತಾಯಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2014ರಲ್ಲಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯದಿಂದ ತುಳು ಮತ್ತು ಕೊಡವ ಭಾಷೆಗಳನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ಪ್ರಸ್ತಾವನೆಗಳು ಕಳುಹಿಸಲ್ಪಟ್ಟಿದ್ದವು ಎಂಬುದು ರಾಜ್ಯಸಭೆಯ ಅಧಿಕೃತ ದಾಖಲೆ ತಿಳಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಅವರು ತುಳು ಭಾಷೆಯು ಕೇವಲ ಒಂದು ಸಂವಹನ ಮಾಧ್ಯಮವಲ್ಲ. ತುಳು ಸಾಹಿತ್ಯ, ಜನಪದ ಪರಂಪರೆ, ಯಕ್ಷಗಾನ, ಭೂತಾರಾಧನೆ ಸೇರಿದಂತೆ ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯೊಂದಿಗೆ ತುಳು ಭಾಷೆ ಅವಿನಾಭಾವ ಸಂಬಂಧ ಹೊಂದಿದೆ. ಈ ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ತುಳುವರ ಸಾಂಸ್ಕೃತಿಕ ಅಸ್ಮಿತೆಯ ಸಂರಕ್ಷಣೆಯ ಭಾಗವಾಗಿದೆ ಎಂದು ತಿಳಿಸಿದ್ದಾರೆ.
2024ರಲ್ಲಿ ಕೇಂದ್ರ ಸರ್ಕಾರವೇ ತುಳು ಸೇರಿದಂತೆ ಹಲವು ಭಾಷೆಗಳನ್ನು 8 ನೇ ಪರಿಚ್ಚೇದಕ್ಕೆ ಸೇರಿಸುವ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ತಿಳಿಸಿದ್ದು, ಆದರೂ ಇನ್ನೂ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಕೇಂದ್ರ ಸರ್ಕಾರವು ಈ ವಿಚಾರವನ್ನು ಮತ್ತಷ್ಟು ವಿಳಂಬಿಸದೆ, ತುಳು ಸೇರಿದಂತೆ ಅರ್ಹ ಭಾಷೆಗಳ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅದೇರೀತಿ ಕರ್ನಾಟಕದಲ್ಲಿ ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ಸರ್ಕಾರ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು.ಈ ನಿಟ್ಟಿನಲ್ಲಿ ನೀಡಿರುವ ಭರವಸೆಗಳನ್ನು ರಾಜ್ಯ ಸರ್ಕಾರ ಆದ್ಯತೆಯಲ್ಲಿ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ತುಳು ಭಾಷೆಯ ಬೇಡಿಕೆಯನ್ನು ಯಾವುದೇ ಪಕ್ಷದ ರಾಜಕೀಯ ವಿಷಯವಾಗಿ ಪರಿಗಣಿಸದೆ, ಪಕ್ಷಭೇದ ಮರೆತು ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು ಈ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಬೊಂಡಾಲ ಚಿತ್ತರಂಜನ್ ಶೆಟ್ಟಿ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ
