ಬಂಟ್ವಾಳ: ಸ್ಕೌಟ್ ಮತ್ತು ಗೈಡಿಂಗ್ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಹಾಗೂ ರಾಷ್ಟ್ರದ ಬಗ್ಗೆ ಗೌರವವನ್ನು ಬೆಳೆಸುತ್ತದೆಯಲ್ಲದೆ ಉತ್ತಮ ನಾಗರಿಕರಾಗಲು ಬೇಕಾದ ಗುಣಗಳನ್ನು ಬಾಲ್ಯದಲ್ಲಿಯೇ ಬೆಳೆಸುವುದರಿಂದ ಭವಿಷ್ಯದಲ್ಲಿ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ ಬಿ ಎಲ್ ಅವರು ಹೇಳಿದ್ದಾರೆ.

ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆ ಪಾಣೆ ಮಂಗಳೂರು ಇದರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಸ್ಕೌಟ್ ಮತ್ತು ಗೈಡ್ ನಾಯಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುತ್ತದೆ ಎಂದರು.
ಇದೇ ವೇಳೆ ಸ್ಕೌಟ್ ಗೈಡ್ಸ್ ಸಂಸ್ಥೆಯ ಸಂಚಾಲಕರು, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಕರಾದ ಆಶಾ ನಾಯಕ್ ಹಾಗೂ 2025-26 ರ ಸಾಲಿನ ದ.ಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗಂಗಾಧರ ಕೆ.ಎನ್ ಅವರನ್ನು ಸನ್ಮಾನಿಸಲಾಯಿತು.
ದ.ಕ. ಸ್ಕೌಟ್ಸ್ ಗೈಡ್ಸ್ ನ ಜಿಲ್ಲಾ ಕಮಿಷನರ್ ಬಿ.ಎಂ.ತುಂಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತೀಮ್ ಕುಮಾರ್ ಭಾಗವಹಿಸಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪುನಶ್ಚೇತನ ತರಬೇತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಗೌರವ ಉಪಾಧ್ಯಕ್ಷರಾದ ಪಿ ಗೋವಿಂದ ಪೈ ಪಾಣೆ ಮಂಗಳೂರು ಅವರು ವಹಿಸಿದ್ದರು.
ಸಂಸ್ಥೆಯ ಇನ್ನೋರ್ವ ಗೌರವ ಉಪಾಧ್ಯಕ್ಷರಾದ ಎಂ.ನರೇಂದ್ರನಾಥ ಕುಡ್ವ, ಪಾಣೆಮಂಗಳೂರು ಎಸ್‌ಎಲ್‌ಪಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಕಾಮತ್ ಏಳಬೆ ನರಿಕೊಂಬು, ರೋಟರಿ ಕ್ಲಬ್ ಬಿ.ಸಿ.ರೋಡು ಇದರ ಅಧ್ಯಕ್ಷರಾದ ರವಿಕುಮಾರ್ ವೇದಿಕೆಯಲ್ಲಿದ್ದರು.
ಸ್ಕೌಟ್ ಗೈಡ್ ಸ್ಥಳೀಯ ಸಂಸ್ಥೆ ಪಾಣಿಮಂಗಳೂರು ಇದರ ವ್ಯಾಪ್ತಿಯ ಶಾಲೆಗಳ ಕಬ್ ಬುಲ್ ಬುಲ್ ,ಸ್ಕೌಟ್ ಮತ್ತು ಗೈಡ್ಸ್ ತರಬೇತಿ ಪಡೆದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯದರ್ಶಿ, ಸ್ಕೌಟ್ ಮಾಸ್ಟರ್ ಸಂಗೀತ ಶರ್ಮಾ ರವರು ಸ್ವಾಗತಿಸಿ, ವರದಿವಾಚಿಸಿದರು, ಕೋಶಾಧಿಕಾರಿ ಕೆ. ಜಯಂತ ನಾಯಕ್ ರವರು ಪ್ರಸ್ತಾವಿಸಿ, ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ಎಚ್. ಕೊಟ್ರಪ್ಪರವರು ವಂದಿಸಿದರು.
