ಮುಂಬಯಿ: ನಮ್ಮ ಮೂಲಸ್ಥಾನ ಹಾಗೂ ಗರೋಡಿಗಳ ಸೇವೆಯಲ್ಲಿ ನಿಷ್ಠೆ ಮತ್ತು ಭಕ್ತಿ ಭಾವನೆ ಇದ್ದಾಗ ಮಾತ್ರ ನಮಗೆ ಆ ದೈವಗಳ ದಿವ್ಯ ಕಾರಣಿಕೆ ಮತ್ತು ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಗರೋಡಿಯು ಕೇವಲ ಪೂಜಾ ಸ್ಥಳವಲ್ಲ; ಅದು ನಮ್ಮ ಹಿರಿಯರು ಉಳಿಸಿ ಬೆಳೆಸಿಕೊಂಡು ಬಂದ ಸಂಸ್ಕೃತಿ, ಆಚಾರ-ವಿಚಾರ ಮತ್ತು ಏಕತೆಯನ್ನು ಕಾಯ್ದುಕೊಳ್ಳುವ ಶಕ್ತಿ ಕೇಂದ್ರವಾಗಿದೆ. ಆದ್ದರಿಂದ ನಾವೆಲ್ಲರೂ ಭೇದ-ಭಾವಗಳನ್ನು ಮರೆತು ಒಂದಾಗಿ ಕ್ಷೇತ್ರ ಸೇವೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ನಮ್ಮ ನಾಡಿಗೆ ಹಾಗೂ ಮುಂದಿನ ಪೀಳಿಗೆಗೆ ಶ್ರೇಯಸ್ಸು ಸಿಗಲು ಸಾಧ್ಯ. ಗರೋಡಿಯ ಅಭಿವೃದ್ಧಿಗಾಗಿ ಟ್ರಸ್ಟ್ ಮುಖೇನ ಸೇವೆ ಸಲ್ಲಿಸುವುದೂ ಸೇವಾ ಭಾಗ್ಯವಾಗಿದೆ ಎಂದು ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ನುಡಿದರು.

ಇಂದಿಲ್ಲಿ ಭಾನುವಾರ ಸಂಜೆ ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೋರೆಟ್ ಪಾರ್ಕ್‌ನ ಕ್ಲಬ್ ಹೌಸ್ ಸಭಾಗೃಹದಲ್ಲಿ ಉಡುಪಿ ಜಿಲ್ಲೆಯ ತೋನ್ಸೆ ಅಲ್ಲಿನ ಟಿಎಸ್‌ಬಿಬಿಪಿಡಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ತನ್ನ 8ನೇ ವಾರ್ಷಿಕ ಮಹಾಸಭೆ ನಡೆಸಿದ್ದು, ಸಭಾಧ್ಯಕ್ಷತೆ ವಹಿಸಿ ನಿತ್ಯಾನಂದ ಕೋಟ್ಯಾನ್ ಮಾತನಾಡಿದರು.

ಟ್ರಸ್ಟ್‌ನ ಉಪಾಧ್ಯಕ್ಷರುಗಳಾದ ಡಿ.ಬಿ ಅವಿನ್, ಸಿ.ಕೆ ಪೂಜಾರಿ, ವಿಶ್ವನಾಥ ತೋನ್ಸೆ, ಗೌರವ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಜೊತೆ ಕಾರ್ಯದರ್ಶಿ ಕರುಣಾಕರ್ ಬಿ.ಪೂಜಾರಿ, ಜೊತೆ ಕೋಶಾಧಿಕಾರಿ ವಿಜಯ್ ಸನಿಲ್ ವೇದಿಕೆಯಲ್ಲಿದ್ದು, ಶ್ರೀ ಬ್ರಹ್ಮ ಬೈದರ್ಕಳರು ಮತ್ತು ಕೋಟಿ ಚೆನ್ನಯ್ಯರ ಪ್ರತಿಮೆಗೆ ಹಾರಾರ್ಪಣೆಗೈದು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಶುಭಾಶೀರ್ವಾದಗಳೊಂದಿಗೆ ಪದಾಧಿಕಾರಿಗಳನ್ನು ಒಳಗೊಂಡು ನಿತ್ಯಾನಂದ ಕೋಟ್ಯಾನ್ ದೀಪಹಚ್ಚಿ ಸಭೆಗೆ ಚಾಲನೆಯನ್ನಿತ್ತರು.

ನಮ್ಮ ಗರೋಡಿಗೆ ೫೦೦ ಇತಿಹಾಸವಿದೆ. ನಮಗೆ ಹಣ ಮುಖ್ಯವಲ್ಲ, ಭಾವನೆ ಬೇಕು. ನಮ್ಮ ನಿರ್ಮಲ ಮನಸ್ಸಿನಿಂದ ಒಂದು ಕೆಲಸ ಮಾಡುವಾಗ ಆ ದೈವಿಕ ಶಕ್ತಿ, ಆಶೀರ್ವಾದ, ಪ್ರೋತ್ಸಾಹ ತನ್ನೀತಾನೇ ಸಿಗುತ್ತದೆ. ದೈವರಾಧನೆಯ ಜೊತೆಗೆ ಸಮಾಜದ ಬಡ-ಅಸಹಾಯಕರಿಗೆ ನೆರವಾಗುವ ಕಾಯಕವನ್ನು ನಿರಂತರವಾಗಿ ನಡೆಸುವುದೂ ನಾವು ದೈವಗಳಿಗೆ ನೀಡುವ ನಿಜವಾದ ಗೌರವವಾಗಿರುತ್ತದೆ. ಮಾತಾಪಿತರು ಹಾಗೂ ದೈವ-ದೇವರುಗಳನ್ನು ಪೂಜಿಸುವ ಮನಸ್ಸು ಶುದ್ಧವಾಗಿದ್ದಾಗ, ಸಮಾಜದಲ್ಲಿ ಧರ್ಮ ಮತ್ತು ನೀತಿ ತಾನಾಗಿಯೇ ಉಳಿದುಕೊಳ್ಳುತ್ತದೆ ಇದಕ್ಕೆ ನಾವು ಸನ್ಮಾನಿಸುವ ದಂಪತಿಗಳೇ ನಿದರ್ಶನ ಎಂದೂ ನಿತ್ಯಾನಂದ್ ತಿಳಿಸಿದರು.
ಟ್ರಸ್ಟ್‌ನ ಸಲಹೆಗಾರ ಸೋಮ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ್ ಅಂಚನ್, ಸದಾನಂದ ಬಿ. ಪೂಜಾರಿ, ಕೃಷ್ಣ ಪಾಲನ್, ಉದಯ ಎನ್.ಪೂಜಾರಿ, ಮಹಿಳಾ ವೃಂದದ ಹೀರಾ ಡಿ.ಅವಿನ್, ಸುಲೋಚನಾ ಆರ್.ಪೂಜಾರಿ ಸೇರಿದಂತೆ ಸದಸ್ಯರನೇಕರು ಹಾಜರಿದ್ದು, ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಎಂ.ಕೋಟ್ಯಾನ್, ಮೃದುಲಾ ಎ.ಕೋಟ್ಯಾನ್, ವಿಶ್ವನಾಥ ತೋನ್ಸೆ, ಸಿ.ಕೆ ಪೂಜಾರಿ, ಡಿ.ಬಿ ಅವಿನ್ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಟ್ರಸ್ಟ್‌ನ ಸೇವೆಗೆ ಹಾರೈಸಿದರು.
ಉಡುಪಿ ಜಿಲ್ಲೆಯ ತೋನ್ಸೆ (ಗುಜ್ಜರಬೆಟ್ಟು) ಮೂಲತಃರವರಾಗಿದ್ದು ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರೂ, ಗರೋಡಿ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಆಗಿರುವ ಡಿ.ಬಿ ಅವಿನ್ (ದಯಾನಂದ್ ಬೂಬ ಅವಿನ್) ಮತ್ತು ಹೀರಾ ದಯಾನಂದ್ ಅವರ 52ನೇ (ಸ್ವರ್ಣಶಕ) ದಾಂಪತ್ಯ ವರ್ಷಾಚರಣೆಗಾಗಿ ಹಾಗೂ ಧೀರಾಜ್ ಡಿ.ಬಿ ಅವಿನ್ (50ನೇ ಹುಟ್ಟುಹಬ್ಬದ ಜೊತೆ) ಮತ್ತು ಶಿಲ್ಪಾ ಧೀರಾಜ್ ಅವಿನ್ ಅವರ ವೈವಾಹಿಕ ರಜತ ಸಂಭ್ರಮಕ್ಕಾಗಿ ಅಧ್ಯಕ್ಷರು, ಪದಾಧಿಕಾರಿಗಳು ಟ್ರಸ್ಟ್ ಪರವಾಗಿ ಸನ್ಮಾನಿಸಿ ಅಭಿನಂದಿಸಿದರು.
ಕರುಣಾಕರ್ ಬಿ.ಪೂಜಾರಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ವಿಜಯ್ ಸನಿಲ್ ಗತ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿ ನೀಡಿದರು. ಸಂಜೀವ ಪೂಜಾರಿ ತೋನ್ಸೆ ಸ್ವಾಗತಿಸಿ ಕೃತಜ್ಞತೆ ಸಮರ್ಪಿಸಿದರು.
ಚಿತ್ರ / ವರದಿ: ರೋನ್ಸ್ ಬಂಟ್ವಾಳ್
