ಬಂಟ್ವಾಳ: ವಿಬಿ-ಜಿ ರಾಮ್ ಜಿ ಕಾಯ್ದೆಯಡಿ ಬಂಟ್ವಾಳ ತಾಲೂಕಿನ 51 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ವಿವಿಧ ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾಯೋಜನೆ ಅನುಮೋದನೆಯಾಗಿದೆ. ಒಟ್ಟು 4,208 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳು ನಿಯಮಾನುಸಾರ ಕಾಮಗಾರಿ ಆರಂಭಿಸಬಹುದಾಗಿದೆ ಎಂದು ಬಂಟ್ವಾಳ ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ಸಚಿನ್ ಕುಮಾರ್ ಹಾಗೂ ಪ್ರಭಾರ ಸಹಾಯಕ ನಿರ್ದೇಶಕರಾದ ವಿಶ್ವನಾಥ್‌ ಬಿ. (ಗ್ರಾ.ಉ)ಅವರು  ಜಂಟಿ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ನರೇಗಾ ಬದಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಕಾಯ್ದೆಯಡಿ ಕೂಲಿಕಾರರಿಗೆ ದಿನಗೂಲಿ ದರವನ್ನು 382 ರೂ.ಗೆ ನಿಗದಿಪಡಿಸಲಾಗಿದ್ದು, ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 125 ಮಾನವ ದಿನಗಳ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವುದರ ಜತೆಗೆ ಗ್ರಾಮಗಳ ಮೂಲಸೌಕರ್ಯ ಹಾಗೂ ವೈಯಕ್ತಿಕ ಆಸ್ತಿಗಳ ಅಭಿವೃದ್ಧಿಗೆ ಯೋಜನೆಯಡಿ ಆದ್ಯತೆ ನೀಡಲಾಗಿದೆ. ತಾಲೂಕಿನ 51 ಗ್ರಾಮ ಪಂಚಾಯತ್‌ಗಳ ಅನುಮೋದನೆಗೊಂಡಿರುವ ಕಾಮಗಾರಿಗಳಲ್ಲಿ ಫಲಾನುಭವಿಗಳ ವೈಯಕ್ತಿಕ ಕಾಮಗಾರಿಗಳಲ್ಲಿ 630 ಬಾವಿ, 402 ದನದ ಹಟ್ಟಿ, 155 ಕೋಳಿ ಶೆಡ್‌, 2,134 ತೋಟಗಾರಿಕೆ ಬೆಳೆಗಳು, 301 ಬಚ್ಚಲು ಗುಂಡಿ, 11 ಕೃಷಿ ಹೊಂಡ, 29 ಕೊಳವೆ ಬಾವಿ ಮರುಪೂರಣ ಘಟಕ, 190 ಬಸಿಗಾಲುವೆ ಹಾಗೂ 63 ಮೇಕೆ ಶೆಡ್‌ ಕಾಮಗಾರಿಗಳು ಪ್ರಮುಖವಾಗಿವೆ ಎಂದು‌ಅವರು‌ತಿಳಿಸಿದ್ದಾರೆ.

ಈ ಕಾಮಗಾರಿಗಳ ಅನುಮೋದನೆಯಿಂದ ಗ್ರಾಮೀಣ ಭಾಗದ ಅರ್ಹ ಕುಟುಂಬಗಳಿಗೆ ಉದ್ಯೋಗಾವಕಾಶ ದೊರೆಯುವುದರ ಜತೆಗೆ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ವೈಯಕ್ತಿಕ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಿ, ಕ್ರಿಯಾಯೋಜನೆಯಲ್ಲಿ ಅನುಮೋದನೆ ಪಡೆದಿರುವ ಫಲಾನುಭವಿಗಳು ಸಂಬಂಧಪಟ್ಟ ಗ್ರಾಮ ಪಂಚಾಯತ್‌ನಿಂದ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದು ನಿಯಮಾನುಸಾರ ಕಾಮಗಾರಿ ಆರಂಭಿಸುವಂತೆ ಸಚಿನ್ ಕುಮಾರ್ ಸೂಚಿಸಿದ್ದಾರೆ.


ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಅಗತ್ಯ ಸಹಕಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ಯೋಜನೆಯಡಿ ಅನುಮೋದನೆಯಾಗಿರುವ ಕಾಮಗಾರಿಗಳನ್ನು ನಿಗದಿತ ಮಾರ್ಗಸೂಚಿ ಹಾಗೂ ನಿಯಮಗಳನ್ವಯ ಕೈಗೆತ್ತಿಕೊಂಡು ಗುಣಮಟ್ಟ ಕಾಪಾಡುವಂತೆ ಅವರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *