ಮಣಿಪಾಲ : ಕಳೆದ ವರ್ಷ ಉಡುಪಿ-ಮಣಿಪಾಲದ ಅಲ್ಲಲ್ಲಿ ಭೂಮಿ ಬಿರುಕು ಘಟನೆ ನಡೆದಿತ್ತಲ್ಲದೆ ಭೂಗರ್ಭ ಶಾಸ್ತ್ರಜ್ಞರು ಭೂಕಂಪದ ಸುಳಿವು ನೀಡಿದ್ದರು. ಆದರೆ ಇದೀಗ ಮಣಿಪಾಲದಲ್ಲಿ ಮತ್ತೆ ಭೂಮಿ ಬಿರುಕು ಬಿಡುವ ಒಂದೊಂದೇ ಘಟನೆಗಳು ಮತ್ತೆ ಧುತ್ತೆಂದು ಎದುರಾಗುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ಹಲವು ತಿಂಗಳುಗಳಿಂದ ಇಲ್ಲಿನ ಮಂಚಿ ಕೆರೆ ಎಂಬಲ್ಲಿ ನಿಗೂಢ ನೈಸರ್ಗಿಕ ಬೆಳವಣಿಗೆಗಳು ನಡೆಯುತ್ತಿದ್ದು, ಶುಕ್ರವಾರದಂದು ಸ್ಥಳೀಯ ಬಾವಿ ಹಾಗೂ ಜಮೀನಿನಲ್ಲಿ ಬಿರುಕು ಕಾಣಿಸಿಕೊಂಡು ಊರ ಜನರನ್ನು ತಬ್ಬಿಬ್ಬುಗೊಳಿಸಿದೆ.
ಜಗದೀಶ್ ಎನ್ನುವವರಿಗೆ ಸೇರಿದ ಮನೆಯ ಬಾವಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಮನೆಯಲ್ಲಿ ಶಂಭು ಕುಂದರ್ ಎಂಬವರು ಬಾಡಿಗೆ ನೆಲೆಸಿದ್ದರು. ಶುಕ್ರವಾರ ಬೆಳಿಗ್ಗೆ ಮನೆಯ ಹೊರಗೆ ಶಬ್ಧ ಉಂಟಾದಾಗ ಹೊರಗೊಡಿ ಬಂದ ಕುಂದರು ಬಾವಿಯ ಕಟ್ಟೆ ಹಾಗೂ ಒಳಗೆ ಬಿರುಕು ಬಿಟ್ಟಿರುವುದನ್ನು ಗಮನಿಸಿದರು. ಸುತ್ತಮುತ್ತಲಲ್ಲಿ ಪರಿಶೀಲಿಸಿದಾಗ ಭೂಮಿ ಕೂಡ ಬಿರುಕು ಬಿಟ್ಟಿರುವುದು ಗಮನಕ್ಕೆ ಬಂದಿತು.
ಕುಂದರವರು ಕೂಡಲೇ ಮನೆಯ ಮಾಲಿಕ ಜಗದೀಶ್ ಅವರಿಗೆ ಮಾಹಿತಿ ರವಾನಿಸಿದ್ದು, ಅವರು ಸ್ಥಳೀಯ ಶಾಸಕರು ಹಾಗೂ ತಹಸಿಲ್ದಾರರರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಬೇಟಿ ನೀಡಿದ ತಹಸಿಲ್ದಾರರು ಶಂಭುಕುಂದರವರಲ್ಲಿ ಮೂರು ದಿನಗಳ ಒಳಗಾಗಿ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದರು. ಅವರಿಗೆ ನೆಲೆಸಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು. ಸ್ಥಳಕ್ಕೆ ಭೂಗರ್ಭ ಶಾಸ್ತ್ಞರು ಭೇಟಿ ನೀಡಲಿದ್ದು, ಅವರ ಪರಿಶೀಲನೆ ನಂತರವೇ ಘಟನೆಗೆ ನಿಜವಾದ ಕಾರಣ ತಿಳಿದುಬರಲಿದೆ.
ಐದು ತಿಂಗಳ ಹಿಂದೆ ಇದೇ ಪರಿಸರದಲ್ಲಿ ಭೂಮಿಯಲ್ಲಿ ಬಿರುಕು ಕಂಡು ಜನರನ್ನು ಆತಂಕಕ್ಕೀಡು ಮಾಡಿತ್ತು. ಎರಡು ತಿಂಗಳ ಹಿಂದೆಯಷ್ಟೇ ಭೂಮಿಯ ಒಳಗಿಂದ ದೊಡ್ಡ ಶಬ್ದವೊಂದು ಕೇಳಿಬಂದಾಗಲೂ ಭೂಕಂಪ ಆಗಿರಬಹುದೆಂದು ತಿಳಿದು ಭಯದಿಂದ ಹಲವು ದಿನಗಳ ಕಾಲ ಸ್ಥಳೀಯರು ನಿದ್ರೆ ಇಲ್ಲದ ರಾತ್ರಿಯನ್ನು ಕಳೆದಿದ್ದರು. ಮುಂದೇನಾಗಬಹುದೆಂಬ ಕುತೂಹಲ ಹಾಗೂ ಭಯದಿಂದ ಇಲ್ಲಿನ ಜನತೆ ಕಾಲ ಕಳೆಯುವಂತಾಗಿದೆ.



