ಬಂಟ್ವಾಳ: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರವರನ್ನು ಕರಾವಳಿಯ ಜನಪ್ರತಿನಿಧಿಗಳು ಭೇಟಿಯಾಗಿ ಅಡಿಕೆ ಬೆಳೆಗಾರರ ವೇದನೆ ಮತ್ತು ವ್ಯಾಪಾರಿಗಳು ಅನುಭವಿಸುವ ಕಷ್ಟಗಳನ್ನು ಮನವರಿಕೆ ಮಾಡಿ ಇದಕ್ಜೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿರುವ ಬೆನ್ನಲ್ಲೆ ಇತ್ತೀಚಿಗೆ ಕರಾವಳಿಯಲ್ಲಿ ಅಡಿಕೆ ಬೆಲೆ ಕೊಂಚ ಚೇತರಿಕೆ ಕಂಡಿರುವುದು ಅಡಿಕೆ ಬೆಳೆಗಾರರ ಮನದಲ್ಲಿ ಸಂತಸ ಮೂಡಿಸಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾವಳಿಯ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಅಡಿಕೆಯು ಸಾವಿರಾರು ರೈತರ ಜೀವನಾಧಾರವಾಗಿದೆ. ಕರಾವಳಿಯ ವಿವಿಧ ಭಾಗಗಳಿಂದ ಅಡಿಕೆ ಮಹಾರಾಷ್ಟ್ರಕ್ಕೆ ಸಾಗಾಟವಾಗುತ್ತಿದ್ದು, ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಕೆಲವೊಂದು ಸ್ಥಳಗಳಲ್ಲಿ ಅಡಿಕೆ ಸಾಗಾಟ ವಾಹನಗಳನ್ನು ಅಧಿಕಾರಿಗಳು ಅನಗತ್ಯ ತಪಾಸಣೆ ಮಾಡುತ್ತಿದ್ದ ಪರಿಣಾಮ ಸಾಗಣೆಯಾಗುತ್ತಿರುವ ಅಡಿಕೆ ಲಾರಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಸಮಸ್ಯೆಯಿಂದ ಅಡಿಕೆ ಬೆಲೆ ಕುಸಿಯಲು ಕಾರಣವಾಗಿತ್ತು.
ಅಡಿಕೆ ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರವರನ್ನು ಭೇಟಿ ಮಾಡಿ ಅಡಿಕೆ ಬೆಳೆಗಾರರ ವೇದನೆ ಮತ್ತು ವ್ಯಾಪಾರಿಗಳು ಅನುಭವಿಸುವ ಕಷ್ಟಗಳ ಬಗ್ಗೆ ಮನವರಿಕೆಮಾಡಿಕೊಟ್ಟಿದ್ದಲ್ಲದೆ ಇದಕ್ಕೊಂದು ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು.
ಇದಕ್ಕೆ ಸ್ಪಂದಿಸಿದ ಸಿಎಂ ಪಡ್ನವೀಸ್ ಅಧಿಕಾರಿಗಳ ಸಭೆ ಕರೆದು ಕ್ರಮಕೈಗೊಂಡ ಹಿನ್ನೆಲೆಯಲ್ಲಿ ನಿಯೋಗದ ಭೇಟಿ ಫಲಪ್ರದವಾಗಿದ್ದು,ಇತ್ತೀಚಿಗೆ ಕರಾವಳಿಯಲ್ಲಿ ಅಡಿಕೆ ಬೆಲೆ ಕೊಂಚ ಚೇತರಿಕೆ ಕಂಡಿರುವುದು ಅಡಿಕೆ ಬೆಳೆಗಾರರ ಮನದಲ್ಲಿ ಸಂತಸ ಮೂಡಿಸಿದೆ ಎಂದು ಪ್ರಭಾಕರ ಪ್ರಭು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ನಿಯೋಗದಲ್ಲಿ ತೆರಳಿರುವ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ಶಾಸಕ ಅರಗ ಜ್ಞಾನೇಂದ್ರ , ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ,ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಕ್ಯಾಂಪ್ಕೋ ಸಂಸ್ಥೆಯ ಪ್ರತಿನಿಧಿಗಳಿಗೆ ಕರಾವಳಿ ಅಡಿಕೆ ಬೆಳೆಗಾರರ ಪರವಾಗಿ ಪ್ರಭು ಅಭಿನಂದನೆ ಸಲ್ಲಿಸಿದ್ದಾರೆ.
