ಬಂಟ್ವಾಳ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯು ಚಾಲ್ತಿಯಲ್ಲಿರುವುದರಿಂದ ಸದ್ಯದ ಮಟ್ಟಿಗೆ ಯಾವುದೇ ಚುನಾವಣೆ ನಡೆಯುವ ಸಾಧ್ಯತೆ ಇಲ್ಲವಾದರೂ ಗ್ರಾಮ ಸರಕಾರವೆಂದೆ ಪರಿಗಣಿಸಲ್ಪಡುವ ಸ್ಥಳೀಯಾಡಳಿತ ಸಂಸ್ಥೆಯಾದ ಗ್ರಾ.ಪಂ.ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿ ಸಿದ್ದವಾಗಿದ್ದು,ಬಂಟ್ವಾಳ ತಾಲೂಕಿಗೊಳಪಟ್ಟಂತೆ ವಾಡ್೯ ವಾರ್ ಮೀಸಲಾತಿಯನ್ನು ಅಂತಿಮಗೊಳಿಸಿ ಜಿಲ್ಲಾಧಿಕಾರಿಯವರು ಪ್ರಕಟಿಸಿದ್ದಾರೆ.

ಬಂಟ್ವಾಳ ತಾಲೂಕಿನ 50 ಗ್ರಾ.ಪಂ.ಗಳ ವಾಡ್೯ ವಾರ್ ಮೀಸಲಾತಿ ಪಟ್ಟಿ ಸ್ಥಳೀಯವಾಗಿ ವಿವಿಧ ಪಕ್ಷಗಳ ಮುಖಂಡರ ವಾಟ್ಸ್ ಪ್ ಗಳಲ್ಲಿ ಹರಿದಾಡಲಾರಂಭಿಸಿದೆ.ಸ್ಥಳೀಯಾಡಳಿತ ಸಂಸ್ಥೆಗಳಾದ ತಾ.ಪಂ.,ಜಿ.ಪಂ.ಚುನಾವಣೆಗೆ ಸಿದ್ದತೆ ಮಾಡಿಕೊಂಡಿದ್ದ ವಿವಿಧ ಪಕ್ಷದ ಆಕಾಂಕ್ಷಿಗಳು ವರ್ಷ ಆರಾದರೂ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡರೂ ಇನ್ನು ಚುನಾವಣೆ ನಡೆಸಲು ಮುಂದಾಗದ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ವಿಧಾನಸಭೆ,ವಿಧಾನಪರಿಷತ್,ಲೋಕಸಭೆಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಯದಿದ್ದರೆ ಹೀಗೆ ನಡೆದುಕೊಳ್ಳುತ್ತಾರೆಯೇ ಎಂಬ ಪ್ರಶ್ನಿಸುತ್ತಿದ್ದಾರೆ.ಜಿ.ಪಂ.,ತಾ.ಪಂ. ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳಾದ ಪಾಲಿಕೆ,ಪುರಸಭೆ,ಪ.ಪಂ.ಗಳಿಗೂ ಸದ್ಯದ ಮಟ್ಟಿಗೆ ಚುನಾವಣೆ ನಡೆಯುವ ಲಕ್ಷಣಗಳಿಲ್ಲ,ಈ ನಡುವೆ ಹಳ್ಳಿ ಸಮರಕ್ಕೆ ಮೀಸಲಾತಿಯನ್ನು ಈಗಲೇ ಪ್ರಕಟಿಸಿರುವುದು ಗ್ರಾಮೀಣಭಾಗದ ವಿವಿಧ ಪಕ್ಷಗಳ ಕಾರ್ಯಕರ್ತರು,ಮುಖಂಡರಿಗೆ ಮೀಸಲಾತಿಗನುಗುಣವಾಗಿ ತಯಾರಾಗುವಂತೆ ಮಾಡಿದೆ.
ಗ್ರಾ.ಪಂ.ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಯದಿದ್ದರೂ ಆಯಾಯ ಪಕ್ಷದ ಬೆಂಬಲಿತರಾಗಿ ಸ್ಪರ್ಧೆಗಿಳಿಯುತ್ತಾರೆ.ಮತ್ತು ಚುನಾವಣೆಯನ್ನು ಆಯಾಯ ಪಕ್ಷದ ಮುಖಂಡರು ಪ್ರತಿಷ್ಠೆಯನ್ನಾಗಿಯು ಸ್ವೀಕರಿಸುತ್ತಾರೆ.
ಗ್ರಾ.ಪಂ.ಗೆ ಅಕ್ಟೋಬರ್ ಕೊನೆಗೆ ಅಥವಾ ನವಂಬರ್ ತಿಂಗಳ ಮೊದಲವಾರದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಹೊಂದಲಾಗಿದ್ದು,ಈ ನಿಟ್ಟಿನಲ್ಲಿ ಜಿಲ್ಲಾಡಳಿತ,ತಾಲೂಕಾಡಳಿಕ್ಕು ಸಿದ್ದತೆ ಮಾಡಿಕೊಳ್ಳಲು ಸಮಯಾವಕಾಶವು ಸಿಗಲಿದೆ.
೫೦ ಗ್ರಾ.ಪಂ. ಬಂಟ್ವಾಳ ತಾಲೂಕಿನಲ್ಲಿ 50 ಗ್ರಾ.ಪಂ.ನ್ನು ಹೊಂದಿದ್ದು,ಇದರಲ್ಲಿ 39 ಗ್ರಾ.ಪಂ.ಗಳು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟರೆ ,ಉಳಿದಂತೆ ತುಂಬೆ,ಮೇರಮಜಲು ಗ್ರಾ.ಪಂ. ಮಂಗಳೂರು ಕ್ಷೇತ್ರಕ್ಕೆ ಸೇರಿದರೂ ಬಂಟ್ವಾಳ ತಾಲೂಕಿನಲ್ಲೆ ಉಳಿದುಕೊಂಡಿದೆ. ಕೇಪು,ಪುಣಚ,ಪೆರ್ನೆ,ಅಳಿಕೆ ಹೀಗೆ ಕೆಲ ಗ್ರಾ.ಪಂ.ಗಳು ಪುತ್ತೂರು ಕ್ಷೇತ್ರಕೊಳಪಟ್ಟಿದೆ.ಅದೇರೀತಿ ಬಂಟ್ವಾಳ ತಾಲೂಕಿನಲ್ಲಿದ್ದ ಸಜೀಪ ನಡು,ಪಡು,ಇರಾ ಸಹಿತ ಕೆಲ ಗ್ರಾಮಗಳು ನೂತನವಾಗಿ ರಚನೆಯಾದ ಉಳ್ಳಾಲ ತಾಲೂಕಿಗೆ ಸೇರ್ಪಡೆಯಾಗಿರುವ ಹಿನ್ನಲೆಯಲ್ಲಿ ಈ ಎಲ್ಲಾ ಗ್ರಾಮಗಳು ಮಂಗಳೂರು ಕೇತ್ರಕ್ಕೆ ಸೇರಿದೆ.
ಹಾಗಾಗಿ ಜಿಲ್ಲೆಯಲ್ಲೆ ಮೂವರು ಶಾಸಕರನ್ನು ಪಡೆದ ತಾಲೂಕಿದ್ದರೆ ಅದು ಬಂಟ್ವಾಳ ಮಾತ್ರ ಎಂಬುದು ವಿಶೇಷವಾಗಿದೆ.ಪ್ರಕಟಿತ ಈ ಮೀಸಲಾತಿ ಅಂತಿಮ ಎಂದು ಹೇಳಲಾಗುತ್ತಿದ್ದರೂ ಕೊನೆಗಳಿಗೆಯಲ್ಲಿ ತಮಗೆ ಬೇಕಾದ ಮೀಸಲು ದಕ್ಕದಿದ್ದವರು ಈ ಮೀಸಲಾತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಕಟಕಟೆ ಹತ್ತಿದರೂ ಅಚ್ಚರಿಡಬೇಕಾಗಿಲ್ಲ..
