ಗುರುಪುರ : ವಾಮಂಜೂರಿನ ಎಸ್ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸರ್ಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಜೂ. ೧೩ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ಎಚ್ಪಿಸಿಎಲ್ನ ಸಹಾಯಕ ಮಾನವ ಸಂಪನ್ಮೂಲ ಅಧಿಕಾರಿ ವಾಸು ನಾಯ್ಕ್ ಅವರು ವಿದ್ಯಾರ್ಥಿ ಸರ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾಯಕತ್ವ ಗುಣ ಬೆಳೆಸಿಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ಇದು ಮೊದಲ ಹೆಜ್ಜೆ. ಈ ಮಂತ್ರಿಮAಡಲ ವಿದ್ಯಾರ್ಥಿಗಳ ಶಿಸ್ತುಬದ್ಧ ಶಿಕ್ಷಣ ಮತ್ತು ಜೀವನ ಸಾಧನೆಗೆ ಪ್ರೇರಕವಾಗಲಿದೆ ಎಂದು ತನ್ನ ಶಾಲಾ ಜೀವನದಲ್ಲಿ ಎರಡೆರಡು ಬಾರಿ ವಿಪಕ್ಷ ನಾಯಕನಾಗಿದ್ದ ಸಂದರ್ಭ ಮೆಲುಕು ಹಾಕಿ, ವಿಶ್ಲೇಷಿಸಿದರು

ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಅವರು ಮಾತನಾಡಿ, ನಾಯಕತ್ವ ಗುಣ ಮೈಗೂಡಿಸಿಕೊಳ್ಳಲು ಇದು ಉತ್ತಮ ವೇದಿಕೆ. ಪ್ರತಿಯೊಬ್ಬರಲ್ಲೂ ನಾಯಕತ್ವ ಗುಣವಿದೆ. ನಾಯಕನಾಗಿಲ್ಲ ಎಂದು ಯಾರೂ ಬೇಸರಪಡುವ ಅಗತ್ಯವಿಲ್ಲ. ಶಾಲಾ ಮಂತ್ರಿಮAಡಲದಲ್ಲಿ ಸಕ್ರಿಯವಾಗಿದ್ದಲ್ಲಿ ತನ್ನಿಂದತಾನೇ ನಾಯಕತ್ವ ಗುಣ ಬರುತ್ತದೆ. ಸಿಕ್ಕಿರುವ ಅವಕಾಶ ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹರಸಿದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ ಮತ್ತು ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ವಿಠಲ್ ವಾಗ್ಮೋರೆ ಅವರು ವಿದ್ಯಾರ್ಥಿ ನಾಯಕರಿಗೆ ಪ್ರಮಾಣವಚನ ಬೋಧಿಸಿದರು. ಪ್ರೌಢಶಾಲಾ ವಿಭಾಗದಿಂದ ಅಮಯ್ ಡಿ. ಹಾಗೂ ಪ್ರಾಥಮಿಕ ಶಾಲಾ ವಿಭಾಗದಿಂದ ಗೌತಮ್ ಅವರು ವಿದ್ಯಾರ್ಥಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಸರ್ಕಾರದ ಎಲ್ಲ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದರು.

ವರ್ತಮಾನದಲ್ಲಿ ನಡೆಯುವ ಚುನಾವಣೆಗಳಲ್ಲಿ ಸಾಕಷ್ಟು ಮತಗಳು ಅಸಿಂಧು ಆಗುತ್ತವೆ. ಸಾಮಾನ್ಯ ಮಕ್ಕಳೊಂದಿಗೆ ವಿದ್ಯಾರ್ಜನೆ ಮಾಡುತ್ತಿರುವ ಈ ಶಾಲೆಯ ಭಿನ್ನಚೇತನ ಮಕ್ಕಳಲ್ಲಿ ಹಲವರು ಕೈಕಾಲುಗಳಲ್ಲಿ, ಮನಸ್ಸಿನಲ್ಲಿ ಚೈತನ್ಯವಿಲ್ಲದಿದ್ದರೂ ಶಿಸ್ತುಬದ್ಧವಾಗಿ ಮತ ಚಲಾಯಿಸಿದ್ದಾರೆ. ಕೆಲವರು ತಮ್ಮ ಪೋಷಕರ ಸಹಾಯ ಪಡೆದು ಅತಿ ಉತ್ಸಾಹದಿಂದ ತಮ್ಮ ವಿದ್ಯಾರ್ಥಿ ನಾಯಕರಿಗೆ ಅತಿ ಆತ್ಮವಿಶ್ವಾದಿಂದ ಮತ ಚಲಾಯಿಸಿದ್ದಾರೆ. ಹಾಗಾಗಿ ಯಾವೊಂದು ಮತವೂ ಅಸಿಂಧು ಆಗಿಲ್ಲ ಎಂಬ ವಿಷಯ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರವಾಯಿತು.
ವಿದ್ಯಾರ್ಥಿ ನಾಯಕ ಅಮಯ್ ಡಿ. ಸ್ವಾಗತಿಸಿದರು. ವಿದ್ಯಾರ್ಥಿನಿ ಅಂಕಿತಾ ನಿರೂಪಿಸಿದರು. ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಅಮಯ್ ಡಿ, ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ನಾಯಕ ಗೌತಮ್, ಮಂಗಳೂರು ಎಚ್ಪಿಸಿಎಲ್ನ ಸಹಾಯಕ ಮಾನವ ಸಂಪನ್ಮೂಲ ಅಧಿಕಾರಿ ವಾಸು ನಾಯ್ಕ್, ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು, ಪ್ರೌಢಶಾಲಾ ಮುಖ್ಯಶಿಕ್ಷಕ ರಮೇಶ್ ಆಚಾರ್ಯ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ವಿಠಲ ವಾಗ್ಮೋರೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಚಿನ್ ಅವರು ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ಹಾಗೂ ಶಿಕ್ಷಕ ವರ್ಗ ಸಹಕರಿಸಿದರು.
