ಗುರುಪುರ : ವಾಮಂಜೂರು ತಿರುವೈಲಿನ ದ.ಕ.ಜಿ.ಪಂ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷವು ಅತಿ ವಿಜೃಂಭಣೆಯಿಂದ ನಡೆಯಿತು.

ಪ್ರಸಕ್ತ ಸಾಲಿನಲ್ಲಿ ತಿರುವೈಲು ಸರ್ಕಾರಿ ಶಾಲೆಗೆ ಮಕ್ಕಳ ಸೇರ್ಪಡೆ ಸಂಖ್ಯೆ ಜಾಸ್ತಿಯಾಗಿದ್ದು, ಸಹಜವಾಗಿಯೇ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳ ಜೊತೆಯಲ್ಲಿ ನೂರಾರು ಪಾಲಕರು ಇದ್ದರು. ಶಾಲಾ ಆಟದ ಮೈದಾನದಲ್ಲಿ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘದವರು ಹಾಗೂ ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್(ರಿ) ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಹೂವಿನ ಮಳೆಗರೆದು, ಪೆನ್ಸಿಲ್-ಪೆನ್ನು ತುಂಬಿದ ಪೌಚ್ ನೀಡಿ ಸ್ವಾಗತಿಸಿದರು.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕುರ್ಚಿ-ಬೆಂಚುಗಳ ಕೊರತೆ ಇರುವ ತಿರುವೈಲು ಶಾಲೆಗೆ, ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್ ಮತ್ತು ನಿವೃತ್ತ ದೈಹಿಕ ಶಿಕ್ಷಕ ಗೋಪಾಲ ಯು. ಅವರ ಮನವಿ ಮೇರೆಗೆ ಮಂಗಳೂರಿನ ಧ್ವನಿ ಮತ್ತು ಬೆಳಕು ಮಾಲಕರ ಅಸೋಸಿಯೇಶನ್‌ನ ವಾಮಂಜೂರು ವಲಯವು ಒಂದು ಲಕ್ಷ ರೂ ವೆಚ್ಚದ ಹೊಸ ಕುರ್ಚಿ ಹಾಗೂ ಬೆಂಚು ಕೊಡುಗೆಯಾಗಿ ನೀಡಿತು.

ಶಾಲಾ ವತಿಯಿಂದ ಸನ್ಮಾನಗೊಂಡ ಅಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ಅವರು ಮಾತನಾಡಿ, ನಮ್ಮ ಅಸೋಸಿಯೇಶನ್ ಈವರೆಗೆ ಶಾಲೆಗಳಿಗೆ ಉಚಿತ ಬರೆಯುವ ಪುಸ್ತಕ ನೀಡುತ್ತ ಬಂದಿದೆ. ತಿರುವೈಲು ಶಾಲೆಯ ಬೇಡಿಕೆಯಂತೆ ಅಸೋಸಿಯೇಶನ್‌ನ ವಾಮಂಜೂರು ವಲಯದ ವತಿಯಿಂದ ಒಂದು ಲಕ್ಷ ರೂ ವೆಚ್ಚದ ಕುರ್ಚಿ-ಬೆಂಚು ಒದಗಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ಈ ಕೊಡುಗೆಯಲ್ಲಿ ಅಸೋಸಿಯೇಶನ್‌ನ ಪ್ರತಿಯೊಬ್ಬರ ಸಹಕಾರವಿದೆ” ಎಂದರು.

ಪುತ್ತೂರಿನಿಂದ ತಿರುವೈಲು ಶಾಲೆಗೆ ವರ್ಗಗೊಂಡು ಬಂದಿರುವ ಮುಖ್ಯಶಿಕ್ಷಕ ನಿಂಗರಾಜು ಕೆ. ಪಿ. ಅವರು ಅಧ್ಯಕ್ಷತೆ ವಹಿಸಿದ್ದರು. ತಿರುವೈಲು ವಾರ್ಡ್ನ ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಕೇಶ್ ಶೆಟ್ಟಿ, ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ರಘು ಸಾಲ್ಯಾನ್, ನಿವೃತ್ತ ದೈಹಿಕ ಶಿಕ್ಷಕ ಗೋಪಾಲ ಯು, ಧ್ವನಿ ಮತ್ತು ಬೆಳಕು ಮಾಲಕರ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದವರು, ಶಿಕ್ಷಕರು, ಸಿಬ್ಬಂದಿ ವರ್ಗ, ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಹಿತೈಷಿಗಳು ಇದ್ದರು. ರಘು ಸಾಲ್ಯಾನ್ ಪ್ರಸ್ತಾವಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಷ್ಮಾ ನಿರೂಪಿಸಿದರು. ಈ ವರ್ಷದಿಂದ ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಸಮವಸ್ತ್ರ (ಸೀರೆಯ ಮೇಲೆ ಕಪ್ಪು ಜಾಕೆಟ್) ಕಡ್ಡಾಯಗೊಳಿಸಲಾಗಿದೆ.

By suddi9

Leave a Reply

Your email address will not be published. Required fields are marked *