ಗುರುಪುರ : ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲುಪೇಟೆ ಮಸೀದಿಗೆ ಹತ್ತಿರದಲ್ಲಿ ಪರಂಬೋಕು ತೋಡಿನ ಹೂಳೆತ್ತುವ ಕಾರ್ಯ ಮುಂದುವರಿದ್ದ ಸಂದರ್ಭದಲ್ಲಿ ಮಂಗಳೂರಿನಿAದ ಹಾಸನದತ್ತ ಹಾದು ಹೋಗಿರುವ ಎಚ್‌ಪಿಸಿಎಲ್‌ನ ಎಲ್‌ಪಿಜಿ ಗ್ಯಾಸ್ ಪೂರೈಕೆಯ ಪೈಪ್‌ಲೈನ್ ತೋಡಿನೊಳಗೆ ಅಪಾಯದ ಮಟ್ಟದಲ್ಲಿರುವುದು ಬೆಳಕಿಗೆ ಬಂದಿದ್ದು, ಇದರಿಂದ ಅಪಾಯ ತಪ್ಪಿದ್ದಲ್ಲ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಬೈಲುಪೇಟೆ ಮಸೀದಿ ಮೂಲಕ ಫಲ್ಗುಣಿ ನದಿ ಸೇರುವ ಬೃಹತ್ ಪರಂಬೋಕು ತೋಡಿನಲ್ಲಿ ಈ ಬಾರಿ ಭಾರೀ ಪ್ರಮಾಣದಲ್ಲಿ ಹೂಳು ತುಂಬಿದ್ದು, ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ ಎಂಬವರು ಸ್ವಯಂಪ್ರೇರಿತರಾಗಿ ಸ್ವತಂ ಕರ್ಚಿನಿಂದ ಜೆಸಿಬಿ ಮೂಲಕ ಹೂಳೆತ್ತುವ ಕಾರ್ಯ ನಡೆಸಿದ್ದಾರೆ. ಈ ವೇಳೆ ತೋಡಿನೊಳಗೆ ಅತಿ ಮೇಲ್ಮಟ್ಟದಲ್ಲಿ ಹಾದು ಹೋಗಿರುವ ಪೈಪ್‌ಲೈನ್‌ಗೆ ಹಾನಿಯುಂಟಾಗಿದೆ. ಆವಾಗಲೇ ಎಚ್‌ಪಿಸಿಎಲ್ ಪೈಪ್‌ಲೈನ್ ಭೂಮಿಯ ಮೇಲ್ಭಾಗದಲ್ಲಿ(ಎರಡುವರೆ ಅಡಿ ಆಳ) ಹಾದು ಹೋಗಿರುವುದು ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಇಲ್ಲೇ ಹತ್ತಿರದಲ್ಲಿ ಗೈಲ್ ಕಂಪೆನಿಯ ಪೈಪ್‌ಲೈನ್ ಭೂಮಿಯಲ್ಲಿ ೧೦ ಅಡಿ ಆಳದಲ್ಲಿ ಹಾದು ಹೋಗಿದೆ. ತೋಡಿನಲ್ಲಿ, ಎಚ್‌ಪಿಸಿಎಲ್ ಪೈಪ್‌ಲೈನ್ ಹತ್ತಿರದಲ್ಲೇ ಪೆಟ್ರೋನೆಟ್ ಕಂಪೆನಿಯ ಡೀಸೆಲ್ ಪೂರೈಕೆ ಪೈಪ್‌ಲೈನ್ ಹಾದು ಹೋಗಿದೆ. ಅದು ಆಳದಲ್ಲಿದೆ. ಎಚ್‌ಪಿಸಿಎಲ್ ಪೈಪ್‌ಲೈನ್ ಕೇವಲ ಎರಡೂವರೆ ಅಡಿ ಆಳದಲ್ಲಿರುವುದರಿಂದ ಅನಾಹುತ ಸಂಭವಿಸಿದೆ. ಮುಂದಿನ ಬೇಸಗೆಯಲ್ಲಿ ಇಲ್ಲಿ ಕಂಪೆನಿಯು ೧೦ ಅಡಿ ಆಳದಲ್ಲಿ ಪೈಪ್‌ಲೈನ್ ಅಳವಡಿಕೆಯೊಂದಿಗೆ ಸಿಮೆಂಟ್ ಹಾಸು ಸುರಕ್ಷತೆ ಒದಗಿಸಬೇಕು” ಎಂದು ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ ಒತ್ತಾಯಿಸಿದ್ದಾರೆ.

ಆದ್ಯಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿರುವ ದೊಡ್ಡ ಪರಂಬೋಕು ತೋಡು ಇದಾಗಿದ್ದು, ಇದರಲ್ಲಿ ಮೂರು ಗ್ರಾಮಗಳ ನೀರು ಹರಿಯುತ್ತದೆ. ಕೃಷಿ ಪ್ರದೇಶವಾದ ಇಲ್ಲಿ ರೈತರು, ಗ್ರಾಮಸ್ಥರು ಮತ್ತು ಪಂಚಾಯತ್‌ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಖಾಸಗಿ ಕಂಪೆನಿಗಳು ಏಕಾಏಕಿಯಾಗಿ ಯೋಜನೆ ಜಾರಿಗೊಳಿಸಿದರೆ ಭವಿಷ್ಯದಲ್ಲಿ ಇಂತಹ ಅನಾಹುತ ನಿರೀಕ್ಷಿತ. ಜ್ವಲನಶೀಲ ಗ್ಯಾಸ್, ಪೆಟ್ರೋಲ್‌ನಂತಹ ಯೋಜನೆಯ ಕಾರ್ಯಗತದ ವೇಳೆ ನಿರ್ದಿಷ್ಟ ಮಾನದಂಡ ಹಾಗೂ ಸಂಪೂರ್ಣ ಸುರಕ್ಷತಾ ಕ್ರಮ ನಿರ್ಲಕ್ಷಿö್ಯಸುವಂತಿಲ್ಲ. ಬೈಲುಪೇಟೆಯಲ್ಲಿ ಗ್ಯಾಸ್ ಪೈಪ್‌ಲೈನ್ ಕನಿಷ್ಠ ೧೦ ಅಡಿ ಆಳದಲ್ಲಿ ಹಾದು ಹೋಗಬೇಕು. ಈ ಬಗ್ಗೆ ಶೀಘ್ರ ಕ್ರಮ ಜರುಗಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಕಂದಾವರ ಗ್ರಾಪಂ ಮಾಜಿ ಅಧ್ಯಕ್ಷೆ ವಿಜಯಾ ಜಿ. ಸುವರ್ಣ ಹಾಗೂ ನಿಕಟಪೂರ್ವ ಸದಸ್ಯ ಜೀವನ್ ಮಲ್ಲಿ ಅವರು ಎಚ್ಚರಿಸಿದ್ದಾರೆ.

ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಎಚ್‌ಪಿಸಿಎಲ್‌ನ ಸುರಕ್ಷತಾ ಅಧಿಕಾರಿ ನಯನ್ ಪಾಲ್ ಅವರು ಸ್ಥಳೀಯರೊಂದಿಗೆ ಮಾತನಾಡಿ, ಸುಮಾರು ೧೦ ವರ್ಷಗಳ ಹಿಂದೆ ಪೈಪ್‌ಲೈನ್ ಅಳವಡಿಸಲಾಗಿದೆ. ಈಗ ಇಲ್ಲಿನ ಭೌಗೋಳಿಕ ಪರಿಸರ ಬದಲಾಗಿದೆ. ಸದ್ಯ ಹಾನಿಗೀಡಾದ ಪೈಪ್‌ಲೈನ್ ದುರಸ್ತಿ ಕಾರ್ಯ ನಡೆಸಲಾಗುವುದು. ಇಲ್ಲಿ ಇನ್ನೂ ಆಳದಲ್ಲಿ ಪೈಪ್‌ಲೈನ್ ಅಳವಡಿಕೆ ಮತ್ತು ಪೈಪ್‌ಲೈನ್‌ನ ಮೇಲ್ಗಡೆ ಸುರಕ್ಷತೆಗಾಗಿ ಕಾಂಕ್ರೀಟ್ ಹಾಸು ಅಳವಡಿಕೆ ಬಗ್ಗೆ ಕಂಪೆನಿಯ ಮೇಲಾಧಿಕಾರಿಗಳಿಗೆ ವರದಿ ಮಾಡುವೆ” ಎಂದು ಭರವಸೆ ನೀಡಿದರು.

ತಪ್ಪಿದ ಭಾರೀ ಅನಾಹುತ :

ಮೊನ್ನೆ ತೋಡಿನಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿದ್ದಾಗ ಪೈಪ್‌ಲೈನ್‌ಗೆ ಹಾನಿಯುಂಟಾಗಿದೆ. ಮಳೆಗಾಲದ ಸಿದ್ಧತೆ ಹಿನ್ನೆಲೆಯಲ್ಲಿ ಗ್ರಾಪಂ ಮಾಡಬೇಕಿದ್ದ ಕೆಲಸವನ್ನು ಸ್ಥಳೀಯ ಖಾಸಗಿ ವ್ಯಕ್ತಿ ಹರೀಶ್ ಶೆಟ್ಟಿಯವರು ಮಾಡಿದ್ದಾರೆ. ಅಂದು ಹತ್ತಿರದಲ್ಲಿ `ಪೀಲಿ’ ಗಿಡಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಒಂದೊಮ್ಮೆ ಹತ್ತಿರದಲ್ಲೇ ಇರುವ ಪೈಪ್‌ಲೈನ್ ಜೆಸಿಬಿ ಕಾರ್ಯದ ವೇಳೆ ಒಡೆದು ಹೋಗುತ್ತಿದ್ದರೆ ದೊಡ್ಡ ಮಟ್ಟದ ಬೆಂಕಿ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *