ಗುರುಪುರ : ಚತುಷ್ಪಥವಾಗಿ ವಿಸ್ತರಣೆಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಪೂರ್ಣ ಕಾಮಗಾರಿಯಿಂದ ಮಳೆಗಾಲದಲ್ಲಿ ಎದುರಾಗುವ ಹಲವು ಗಂಭೀರ ಸಮಸ್ಯೆಗಳು ಈ ಬಾರಿ ಆರಂಭದ ಮಳೆಗೆ ಕಂಡು ಬಂದಿವೆ.

ಶುಕ್ರವಾರ ಬೆಳಿಗ್ಗಿನಿಂದ ಸುರಿಯುತ್ತಿರುವ ಜಡಿಮಳೆಗೆ ಕೆತ್ತಿಕಲ್ ಗುಡ್ಡ ಪ್ರದೇಶದ ಕೆಳಗಡೆ ಹಾದು ಹೋಗಿರುವ ಹೆದ್ದಾರಿಯಲ್ಲಿ ಅಕ್ಷರಶಃ ಕೃತಕ ನೆರೆ ಕಂಡು ಬಂದಿದೆ. ಕೆತ್ತಿಕಲ್, ಪರಾರಿ, ವಾಮಂಜೂರು ಭಾಗದಲ್ಲಿ ಹೆದ್ದಾರಿ ತುಂಬೆಲ್ಲ ನೀರಿಂದ ವಾಹನ ಸಂಚಾರಕ್ಕೆ ಧಕ್ಕೆ ಉಂಟಾಗಿದೆ.

ಕಳೆದ ವರ್ಷದ ಮಳೆಗೆ ಗುಡ್ಡ ಕುಸಿದಿದ್ದ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಹೆದ್ದಾರಿ ರಕ್ಷಣೆಗಾಗಿ ಈ ಬಾರಿ ಗ್ಯಾಬಿಯಲ್ ವಾಲ್ ನಿರ್ಮಿಸಲಾಗಿದೆ. ಹಿಂದಿನ ಬಾರಿ ಇಲ್ಲಿ ಗುಡ್ಡದ ಮೇಲಿಂದ ಹೆದ್ದಾರಿಯತ್ತ ಒಂದೆರಡು ನೀರಿನ ಝರಿ ಇದ್ದರೂ, ನಿನ್ನೆ ಸುರಿದ ಮೊದಲ ಮಳೆಗೆ ಗ್ಯಾಬಿಯನ್ ವಾಲ್, ಗುಡ್ಡಕ್ಕೆ ಹಾಸಲಾದ ರಕ್ಷಣಾ ತಂತ್ರಜ್ಞಾನ ಹಾಸುಗಳ ಉದ್ದಕ್ಕೂ ನೀರಿನ ಝರಿಗಳು ಕಂಡು ಬಂದಿವೆ. ಇಲ್ಲೆಲ್ಲ ಈ ಬಾರಿಯೂ ಗುಡ್ಡ ಕುಸಿಯುವ ಅಪಾಯ ಎದುರಾಗಿದೆ.

ಅಪೂರ್ಣ ಕಾಮಗಾರಿ ನಡೆದಿರುವ ಪರಾರಿ ಹೆದ್ದಾರಿ ಭಾಗದಲ್ಲಿ ಎಲ್ಲೆಂದರಲ್ಲಿ ಕೆಸರು ನೀರು ಕಂಡು ಬಂದಿದೆ. ಹೆದ್ದಾರಿಯ ಬಹುತೇಕ ಕಡೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರೆಲ್ಲ ರಸ್ತೆಯಲ್ಲೇ ಹರಿಯುವಂತಾಗಿದೆ. ನೀರಿನೊಂದಿಗೆ ರಸ್ತೆ ಮೇಲೆ ಜಲ್ಲಿ ಕಲ್ಲುಗಳು ಹರಿದಾಡಿ ಅಲ್ಲಲ್ಲಿ ರಾಶಿ ಬಿದ್ದಿವೆ. ಇದರಿಂದ ದ್ವಿಚಕ್ರ ವಾಹನಿಗರಿಗೆ ಅಪಾಯ ತಪ್ಪಿದ್ದಲ್ಲ.

ಕಳೆದ ವರ್ಷ ಕೆತ್ತಿಕಲ್ ಶಾಲೆಗಿಂತ ಮುಂದಕ್ಕೆ ಕುಸಿದ ಗುಡ್ಡಕ್ಕೆ ಅಳವಡಿಸಲಾಗಿದ್ದ ವಿಶೇಷ ತಂತ್ರಜ್ಞಾನದ ಬಲೆ ನುಚ್ಚುನೂರಾಗಿತ್ತು. ಈಗ ಆ ಸ್ಥಳದಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಈ ಬಾರಿಯೂ ಅಪಾಯದ ಮುನ್ಸೂಚನೆ ಕಂಡು ಬಂದಿದೆ.

By suddi9

Leave a Reply

Your email address will not be published. Required fields are marked *