ಮೂಡುಬಿದರೆ: ಆಲಂಗಾರು ಹೋಲಿ ರೋಜರಿ ಚರ್ಚ್ ನಲ್ಲಿ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಯೇಸುವಿನ ಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಜ.11ರಂದು ಬಾಲ ಯೇಸುವಿನ ಹಬ್ಬ ನಡೆಯಲಿದೆ ಎಂದು ಆಲಂಗಾರು ಚರ್ಚ್ನ ಧರ್ಮಗುರು ಬೇಸಿಲ್ ವಾಸ್ ಹೇಳಿದರು.

ಅವರು ಆಲಂಗಾರು ಚರ್ಚ್ ನ ಸಭಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಪ್ರಸ್ತುತ ವರ್ಷದ ಹಬ್ಬದ ಆಚರಣೆಯ ಪೂರ್ವ ತಯಾರಿಯು ಭರದಿಂದ ಸಾಗುತ್ತಿದ್ದು ಪೂರ್ವಭಾವಿ ಪ್ರಾರ್ಥನಾ ವಿಧಿಯು ಜ.2ರಂದು ಆರಂಭಗೊಳ್ಳಲಿದ್ದು ಸತತ 9 ದಿನಗಳ ಭಕ್ತಿ ಪೂರ್ವಕ ಸಿದ್ಧತೆಗಳು ಪ್ರತಿದಿನ ಸಂಜೆ 4.30 ಕ್ಕೆ ವಿಶಿಷ್ಟ ಪ್ರಾರ್ಥನೆಗಳೊಂದಿಗೆ ನೆರವೇರಲ್ಪಡುತ್ತದೆ.
ಭಕ್ತಿ ಭಾವ, ಧ್ಯಾನಗಳಿಂದ ಯೇಸುವಿನ ಆರಾಧನೆ ಮಾಡುವಂತದ್ದು, ಆತ್ಮಗಳನ್ನು ಶುದ್ದೀಕರಣಗೊಳಿಸುವಂತಹದ್ದು ಈ ಸಲುವಾಗಿ ಶಿವಮೊಗ್ಗ ಧರ್ಮಪ್ರಾಂತದ ರೆ.ಫಾ. ರೋಮನ್ ಪಿಂಟೋ ಹಾಗೂ ಬ್ರದರ್ ಟಿ.ಕೆ.ಜಾರ್ಜ್ ಇವರ ಪ್ರಭಾವಶಾಲಿ ಧ್ಯಾನಕೂಟ ಜ 8, 9 ಮತ್ತು 10ರಂದು ನಡೆಯಲಿದೆ. ಜ.9ರಂದು ಸಂಜೆ ಯಾತ್ರಾಲಯಕ್ಕೆ ಹೊರೆ ಕಾಣಿಕೆ ತರುವ ಭವ್ಯ ಮೆರವಣಿಗೆಯು ಆಲಂಗಾರು ಮುಖ್ಯ ತಾಣದಿಂದ ಆರಂಭಗೊಂಡು ಪುಣ್ಯಕ್ಷೇತ್ರದವರೆಗೆ ನಡೆಯಲಿದೆ ಮತ್ತು ಜ.10ರಂದು ಸಂಜೆ ಭಾಷೇತರ ಭಕ್ತಾಧಿಗಳ ಅನುಗುಣಕ್ಕಾಗಿ ಕನ್ನಡ ಭಾಷೆಯಲ್ಲಿ, ಬೆಳ್ತಂಗಡಿ ಧರ್ಮಪ್ರಾಂತ್ಯದ ವಂ/ಥೋಮಸ್ ಪುದಿಯಿರ ಅವರ ನೇತೃತ್ವದಲ್ಲಿ ಮಲಯಾಳಂ ಮತ್ತು ಜ.11ರಂದು ವಂ.ಕ್ಲೋಡ್ ಕೋರ್ಡಾರ್ ಅವರ ನೇತೃತ್ವದಲ್ಲಿ ಆಂಗ್ಲ ಭಾಷೆಯಲ್ಲಿ ಬಲಿಪೂಜೆಯು ನಡೆಯಲಿದೆ ಎಂದು ತಿಳಿಸಿದರು.
ಕ್ರಿಸ್ಮಸ್ ಸ್ನೇಹಕೂಟ : ಕ್ರೈಸ್ತ ಹಾಗೂ ಕ್ರೈಸ್ತೇತರ ಬಂಧುಗಳ ಸಹಮಿಲನ ಕ್ರಿಸ್ಮಸ್ ಸ್ನೇಹ ಕೂಟವು ಡಿ21 ಭಾನುವಾರ ಸಂಜೆ ಇಗರ್ಜಿಯ ವಠಾರದಲ್ಲಿ ನಡೆಯಲಿದೆ. ಅಲ್ಲದೆ ಲೋಕ ಕಲ್ಯಾಣಕ್ಕಾಗಿ ಡಿ.30ರಂದು ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಪ್ರಾರ್ಥನೆಗಳು ನಡೆದು ಸಂಪನ್ನಗೊಳ್ಳಲಿದೆ ಎಂದು ಧರ್ಮಗುರು ತಿಳಿಸಿದರು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಲೋಬೊ, ಸಮಿತಿದ ಸದಸ್ಯ ಪಿ.ಕೆ.ಥೋಮಸ್, ಸಿಲ್ವೆಸ್ಟರ್ ರೇಗೊ, ಮಾರ್ಕರ್ ದಾಂತಿಸ್, ಬೆನಿಡಿಕ್ಟಾ ರೊಡ್ರಿಗಸ್ ಮತ್ತು ಸಂತೋಷ್ ರೊಡ್ರಿಗಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
