ಬಂಟ್ವಾಳ: ತನ್ನ ಬಹುಕಾಲದ ಕನಸಿನ ಯೋಜನೆಯಲ್ಲೊಂದಾದ ಕಡೇಶಿವಾಲಯದಿಂದ, ಅಜಿಲಮೊಗರು ಗ್ರಾಮವನ್ನು ಸಂಪರ್ಕಿಸುವ “ಸೌಹಾರ್ದ ಸೇತುವೆ” ಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವಾಗಿ ಲೋಕಾರ್ಪಣೆಯಾಗಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಬುಧವಾರ ಸೌಹಾರ್ದ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಡೇಶಿವಾಲಯ ಮತ್ತು ಅಜಿಲಮೊಗರು ಮಧ್ಯೆ ಸಂಪರ್ಕ ಸೇತುವೆಯು ಬಹುಕಾಲದ ಬೇಡಿಕೆಯಾಗಿದ್ದು,ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ
ಎಂದರು.

ಈ ಸೌಹಾರ್ಧ ಸೇತುವೆ ಎರಡು ಧಾರ್ಮಿಕ ಶ್ರದ್ದಾ ಕೇಂದ್ರಗಳ ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಲಿದೆಯಲ್ಲದೆ ಬಂಟ್ವಾಳ ತಾಲೂಕಿನ ನಾವೂರು, ಮಣಿನಾಲ್ಕೂರು, ಸರಪಾಡಿ, ಕಡೇಶ್ವಾಲ್ಯ, ಬುಡೋಳಿ, ಬರಿಮಾರು ಹಾಗೂ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮತ್ತು ಬೆಳ್ತಂಗಡಿ ತಾಲೂಕಿನ ತೆಕ್ಕಾರು, ಬಾರ್ಯ, ತಣ್ಣೀರುಪಂತ ಮತ್ತಿತರ ಪ್ರದೇಶಗಳಿಗೆ ತ್ವರಿತವಾಗಿ ತೆರಳಲು ಅನುಕೂಲವಾಗಲಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರೇ ಸೇತುವೆ ಕಾಮಗಾರಿಗೆ ಶಂಕುಸ್ಥಾನೆ ನೆರವೇರಿಸಿದ್ದರು.ಬಳಿಕ ನಾನಾ ಕಾರಣಗಳಿಂದ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗಿದ್ದು,
.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಹಿತ ಜಿಲ್ಲಾಧಿಕಾರಿ ,ಸಂಬಂಧಿಸಿದ ಇಲಾಖಾ ಇಂಜಿನಿಯರ್ ಗಳಿಗೆ ಒತ್ತಡ ಹೇರಿದ ಹಿನ್ನಲೆಯಲ್ಲಿ ಕಾಮಗಾರಿ ಅಂತಮ ಹಂತಕ್ಕೆ ತಲುಪಿದೆ ಎಂದರು.
ಶಾಸಕರ ನಿಧಿಯನ್ನು ಬಳಸಿಕೊಂಡು ಅಭಿವೃದ್ಧಿ ಮಾಡುವುದು ದೊಡ್ಡ ವಿಚಾರವಲ್ಲ,ಸರಕಾರದ ವಿಶೇಷ ಅನುದಾನವನ್ನು ತರಿಸಿಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡುವುದು ಸಾಧನೆಯಾಗಿದೆ ಎಂದ ಮಾಜಿ ಸಚಿವ ರಮಾನಾಥ ರೈ ಅವರು ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 5 ಸಾವಿರ ಕೋಟಿಗಿಂತಲೂ ಮಿಕ್ಕಿ ಅನುದಾನವನ್ನು ತಂದು ಬಂಟ್ವಾಳ ಕ್ಷೇತ್ರವನ್ನು ಅಭಿವೃದ್ಧಿ ಮಾಡಿರುವುದಲ್ಲದೆ ರಾಜ್ಯದಲ್ಲೇ ಪ್ರಥಮವಾಗಿ 94 ಸಿ ಯಡಿ ಹಕ್ಕುಪತ್ರ ವಿತರಿಸಿರುವ ಕಾರ್ಯಮಾಡಿರುವುದು ತನಗೆ ತೃಪ್ತಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಪಕ್ಷದ ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ್ ಜೈನ್, ಅಬ್ಬಾಸ್ ಆಲಿ, ಸಂಪತ್ ಕುಮಾರ್ ಶೆಟ್ಟಿ, ಶಿವಪ್ಪ ಪೂಜಾರಿ ಹಟ್ಟತಡ್ಕ, ಕಾಂಚಲಾಕ್ಷಿ, ಪೂವಪ್ಪ ಪೂಜಾರಿ, ಚೆರಿಮೋನು, ಸುರೇಶ್ ಜೋರಾ, ಆದಂ ಕುಂಜ್ಞಿ, ಸಾದಿಕ್ , ಅಬ್ದುಲ್ ರಜಾಕ್, ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
