ಪಡುಬಿದ್ರಿ: ಪುರುಷನ ಹೆಣ ಹಗ್ಗದಲ್ಲಿ ನೇತಾಡುವ ಸ್ಥಿತಿಯಲ್ಲಿದ್ದರೆ, ಮಹಿಳೆಯ ಶವ ಕತ್ತುಕೊಯ್ದ ಭೀಕರ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಪಡುಬಿದ್ರಿಯ ಮುಖ್ಯ ಪೇಟೆಯ ದೂಜಪೂಜಾರಿ ಬಟ್ಟೆಯಂಗಡಿಯ ಹಿಂಭಾಗದ ಕಟ್ಟಡದಲ್ಲಿ ಕಂಡುಬಂದಿದೆ. ಈ ಘಟನೆಯಲ್ಲಿ ಪ್ರಿಯತಮ ತನ್ನ ಪ್ರಿಯತಮೆಯ ಕತ್ತು ಕೊಯ್ದು ಕೊಂದು ಬಳಿಕ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಆತ್ಮಹತ್ಯೆ ಮಾಡಿಕೊಂಡವನನ್ನು ನವೀನ್ ದೇವಾಡಿಗ(40) ಎಂದು ಗುರುತಿಸಲಾಗಿದ್ದು, ಕೊಲೆಯಾದಾಕೆಯನ್ನು ತಾರಾ ದೇವಾಡಿಗ(36) ಎಂದು ಗುರುತಿಸಲಾಗಿದೆ.
ನವೀನ್ ದೇವಾಡಿಗ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ತಾರಾಳೊಂದಿಗೆ ಪ್ರೇಮ್ ಕಹಾನಿ ಶುರು ಮಾಡಿಕೊಂಡಿದ್ದ. ತಾರಾ ದೇವಾಡಿಗಗೂ ಮದುವೆಯಾಗಿದ್ದು ಇಬ್ಬರು ಗಂಡುಮಕ್ಕಳನ್ನು ಹೊಂದಿದ್ದಾಳೆ.
ಇಬ್ಬರಿಗೂ ಪರಸ್ಪರ ಕ್ಷುಲಕ ಕಾರಣಕ್ಕೆ ಜಗಳ ನಡೆದು ಈ ಘಟನೆ ಸಂಭವಿಸಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಇವರ ಸಾವಿನಿಂದ ಮಕ್ಕಳು ಕಂಗಾಲಾಗಿದ್ದು ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ



