ಉಡುಪಿ: ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ ಇದರ ಆಶ್ರಯದಲ್ಲಿ `ಕೊಡಚಾದ್ರಿ ಉಳಿಸಿ, ಸೌಪರ್ಣಿಕಾ ಉಳಿಸಿ’ ಹೋರಾಟದ ಮುಂದುವರಿದ ಭಾಗವಾಗಿ ಡಿ.22ರ ಸೋಮವಾರ ಕುಂದಾಪುರ ತಾಲೂಕಿನ ಜಡ್ಕಲ್ ಸಮೀಪದಲ್ಲಿರುವ ಬೆಳ್ಕಲ್ ಗೋವಿಂದ ತೀರ್ಥದಲ್ಲಿ `ಸ್ವಚ್ಛತಾ ಆಂದೋಲನ’ ಕಾರ್ಯಕ್ರಮ ನಡೆಯಲಿದೆ. ಕೇಮಾರು ಈಶ ವಿಠಲದಾಸ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
kodachadree-01

kodachadree-03

kodachadree-02

ಗೋವಿಂದ ತೀರ್ಥ ವಿಶೇಷತೆ:
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬರುವ ಕೊಡಚಾದ್ರಿ ಬೆಟ್ಟದ 64 ತೀರ್ಥಗಳಲ್ಲಿ ಪರಮ ಪವಿತ್ರ ಎಂದು ನಂಬಲಾಗುವ ಗೋವಿಂದ ತೀರ್ಥ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಹಾವಳಿಯಿಂದ ಹಾಳಾಗುತ್ತಿದೆ. ಪ್ರವಾಸಿಗರು ಪ್ಲಾಸ್ಟಿಕ್, ಬಾಟಲಿ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವ ಮೂಲಕ ಪರಿಸರದ ಮೇಲೆ ಮಾರಕ ಪರಿಣಾಮ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಮಾರು ಶ್ರೀಗಳು ಸ್ವಚ್ಛತಾ ಆಭಿಯಾನಕ್ಕೆ ಮುಂದಾಗಿದ್ದು ಡಿ.22ರ ಮುಂಜಾನೆಯಿಂದ ಸ್ವಚ್ಛತಾ ಅಭಿಯಾನ ನಡೆಯಲಿದೆ.

ಚಾರಣ ಸಂಘಟನೆಗಳ ಸಹಭಾಗಿತ್ವ:
ಕೊಡಚಾದ್ರಿ ಸಂರಕ್ಷಣಾ ಟ್ರಸ್ಟ್ ಕರೆ ನೀಡಿರುವ ಗೋವಿಂದ ತೀರ್ಥ ಸ್ವಚ್ಛತಾ ಅಭಿಯಾನಕ್ಕೆ `ಆರೋಹಿ’ ಸಹಿತ ವಿವಿಧ ಚಾರಣ ಸಂಘಟನೆಗಳು, ಪರಿಸರ ಪ್ರೇಮಿಗಳು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಡಿ.22ರಂದು ಮುಂಜಾನೆ ಕೊಲ್ಲೂರು ಸಮೀಪದ ಜಡ್ಕಲ್ ನಿಂದ ಮುದೂರು ಮಾರ್ಗವಾಗಿ ಬೆಳ್ಕಲ್ ಸೇರಿ ಅಲ್ಲಿಂದ ಮೂರು ಕಿ.ಮೀ. ಕಾಲ್ನಡಿಗೆಯಲ್ಲಿ ಚಾರಣ ಕೈಗೊಂಡು `ಗೋವಿಂದ ತೀರ್ಥ’ ಜಲಧಾರೆಯ ಪರಿಸರವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

ಗೋವಿಂದ ತೀರ್ಥ ಸ್ನಾನ:
ಡಿ.22ರಂದು ಎಳ್ಳಮವಾಸ್ಯೆ ಆಗಿರುವ ಕಾರಣ ಗೋವಿಂದ ತೀರ್ಥದಲ್ಲಿ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ಐತಿಹ್ಯವಿರುವ ಕಾರಣ ಸುತ್ತಮುತ್ತಲ ಹತ್ತೂರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಕೊಡಚಾದ್ರಿ ತಪ್ಪಲಿನಲ್ಲಿ ಬರುವ ಈ ಜಲಧಾರೆ ನಿಸರ್ಗ ರಮಣೀಯತೆಯನ್ನು ಹೊಂದಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

`ಪ್ಲಾಸ್ಟಿಕ್ ಮುಕ್ತ ಕೊಡಚಾದ್ರಿ ನಮ್ಮ ಉದ್ದೇಶ’
`ಕೊಡಚಾದ್ರಿ ಅಳಿವಿನಂಚಿನ ಅಸಂಖ್ಯ ಜೀವವೈವಿಧ್ಯದ ತಾಣ. ಇಲ್ಲಿನ ಪರಿಸರದಲ್ಲಿ ನಿತ್ಯ ತಿರುಗಾಡಿದರೆ ಖಾಯಿಲೆ ನಮ್ಮ ಹತ್ತಿರವೂ ಸುಳಿಯಲಾರದು. ಶುದ್ಧ ಗಾಳಿ, ಆಯುರ್ವೇದ ವೃಕ್ಷ ಸಂಕುಲ ಇವೆಲ್ಲ ಕೊಡಚಾದ್ರಿ ಬೆಟ್ಟದ ವಿಶೇಷತೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಯೂ ಪ್ಲಾಸ್ಟಿಕ್, ತ್ಯಾಜ್ಯದ ಹಾವಳಿ ಮಿತಿಮೀರುತ್ತಿದೆ. ಇದನ್ನು ತಪ್ಪಿಸಲು ಪ್ಲಾಸ್ಟಿಕ್ ಮುಕ್ತ ಕೊಡಚಾದ್ರಿಗೆ ಸಂಕಲ್ಪ ಕೈಗೊಂಡು ಕೊಡಚಾದ್ರಿಯ ಪವಿತ್ರ ತೀರ್ಥವಾಗಿರುವ ಗೋವಿಂದ ತೀರ್ಥವನ್ನು ಸ್ವಚ್ಛಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ. ಪರಿಸರಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಲ್ಲಿ ಸ್ವಚ್ಛ, ಸ್ವಸ್ಥ ಪರಿಸರದ ಕನಸು ನನಸಾಗಲಿದೆ’

By suddi9

Leave a Reply

Your email address will not be published. Required fields are marked *