ಬಂಟ್ವಾಳ: ಭಕ್ತಿಯ ಪರಕಾಷ್ಟೆಗೆ ಹಿರಿಯರು ಭಜನಾ ಮಂದಿರ ನಿರ್ಮಿಸಿದ್ದಾರೆ. ಸಮಾಜದಲ್ಲಿ ರೇಡಿಯೋ ಬರುವುದಕ್ಕಿಂತ ಮೊದಲು ಪ್ರತೀ ಮನೆಯಲ್ಲಿ ಭಜನೆಯ ನಿನಾದ ಕೇಳುತ್ತಿದ್ದು, ಇದೀಗ ಕಡಿಮೆಯಾಗಿದ್ದರೂ ಅಂತಿಮವಾಗಿ ನಮಗೆ ದೇವರ ನಾಮವೇ ಮುಕ್ತಿಯ ಕಡೆಗೆ ಕೊಂಡೊಯುತ್ತದೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ನುಡಿದರು.

ಬಂಟ್ವಾಳ ಬೈಪಾಸ್ ನ ರಾಮನಗರದಲ್ಲಿರುವ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀ ರಾಮ ನವಮಿ ಉತ್ಸವದ ನೂರು ವರುಷದ ಸಂಭ್ರಮದ ಪ್ರಯಕ್ತ ಗುರುವಾರ ಮಂದಿರಕ್ಕೆ ಭೇಟಿ ನೀಡಿದ ಶ್ರೀಗಳು ಬಳಿಕ ಆರ್ಶೀವಚನಗೈದರು.
ಈ ಸಂದರ್ಭದಲ್ಲಿಹಿಮಾಚಲ ಪ್ರದೇಶದ ವಿಜಯಾನಂದ ಸರಸ್ವತಿ ಸ್ವಾಮೀಜಿ, ಉದ್ಯಮಿ ಉಮೇಶ್ ಶೆಟ್ಟಿ ಮುಂಬೈ, ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ನಾಗೇಶ ಶೆಟ್ಟಿ, ಸ್ಥಳೀಯ ಪ್ರಮುಖರಾದ ಉದಯ ಕುಮಾರ್ ರಾವ್, ಹರೀಶ್ ಶೆಟ್ಟಿ ಬೈಪಾಸ್, ಭುವನೇಶ್ ಶೆಟ್ಟಿ, ಸುರೇಶ್ ಶೆಟ್ಟಿ, ಗಣೇಶ್ ಪ್ರಕಾಶ್ ಶೆಟ್ಟಿ, ಜಗನ್ನಾಥ ಬಂಟ್ವಾಳ್, ಸುಶೀಲ ಜನಾರ್ದನ ಶೆಟ್ಟಿ,ಕಿಯೋನಿಕ್ಸ್ ನಿಗಮದ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ರೋಟರಿ ಕ್ಲಬ್ ಮಾಜಿ ಗವರ್ನರ್ ರೋ.ಪ್ರಕಾಶ್ ಕಾರಂತ್, ಉದ್ಯಮಿ,ಸಂದೇಶ್ ಶೆಟ್ಟಿ ಅರೆಬೆಟ್ಟು,ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಬೂಡಾ ಮಾಜಿ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

ಇದಕ್ಕು ಮೊದಲು ಪೇಜಾವರ ಮಠಾಧೀಶರನ್ನು ಬೈಪಾಸ್ ಜಂಕ್ಷನ್ ನಿಂದ ಮಂದಿರದ ಹೊರಗೆ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.ಮಧ್ಯಾಹ್ನದ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಿತು.
ರಾಮನವಮಿಯ ನೂರುವರ್ಷದ ಸಂಭ್ರಮದ ಹಿನ್ನಲೆಯಲ್ಲಿ ಶ್ರೀ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆ ಸಂಭ್ರಮದಿಂದ ನಡೆಯಿತು.
ರಾಮನವಮಿ ಪ್ರಯುಕ್ತ
ಗುರುವಾರ ಸೂರ್ಯೋದಯಕ್ಕೆಏಕಹಾ ಭಜನಾ ಸಂಕೀರ್ತನೆಗೆ ಚಾಲನೆ ನೀಡಲಾಯಿತು ಶುಕ್ರವಾರ ಸೂರ್ಯೋದಯದವರೆಗೆ ಸಂಕೀರ್ತನೆ ನಡೆಯಿತು.
