ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡ್-ಕೈಕುಂಜೆ ರಸ್ತೆಯಲ್ಲಿ ಕಳೆದ ಆರು ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡ ರೂ 75ಲಕ್ಷ ವೆಚ್ಚದ ಕಾಂಕ್ರಿಟೀಕರಣ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಸೂಚನೆಯಂತೆ ಪ್ರತ್ಯೇಕ ತನಿಖಾ ತಂಡವೊಂದು ಮಂಗಳವಾರ ಆಗಮಿಸಿ ರಸ್ತೆ ಗುಣಮಟ್ಟದ ಬಗ್ಗೆ ತನಿಖೆ ಆರಂಭಿಸಿದೆ.
ಬಂಟ್ವಾಳ ಪುರಸಭೆ ವಿರೋಧ ಪಕ್ಷದ  ಸದಸ್ಯ ಎ. ಗೋವಿಂದ ಪ್ರಭು ಅವರು ಇಲ್ಲಿನ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಹಾಗೂ ನಕ್ಷೆ ತಿದ್ದುಪಡಿಗೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು ಎನ್ನಲಾಗಿದೆ.
DSC_8586

DSC_8589
ಸರ್ಕಾರದ ನಗರಾಭಿವೃದ್ಧಿ ಯೋಜನೆಯಡಿ ಒಟ್ಟು ರೂ 75 ಲಕ್ಷ ವೆಚ್ಚದಲ್ಲಿ ಕೈಗೊಂಡ ಕಾಂಕ್ರಟೀಕರಣ ಕಾಮಗಾರಿಯಲ್ಲಿ ಪೂರ್ವ ಶರ್ತನುಸಾರ ಪಾರ್ಕಿಂಗ್ ವ್ಯವಸ್ಥೆ, ನಗರ ಹಸುರೀಕರಣ, ಸುಸಜ್ಜಿತ ಚರಂಡಿ ನಿರ್ಮಿಸಿಲ್ಲ. ದ್ವಿಮುಖ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ರಸ್ತೆ ವಿಭಾಜಕ ಅಳವಡಿಸಿಲ್ಲ. ಸ್ಥಳೀಯರು ನಡೆಸಿದ್ದ ಭಾರೀ ಪ್ರತಿಭಟನೆ ಬಳಿಕ ತರಾತುರಿಯಲ್ಲಿ ನಡೆಸಿರುವ ಕಾಂಕ್ರಟೀಕರಣ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿತ್ತು.
ಇದರಿಂದಾಗಿ ಲೋಕಾಯುಕ್ತ ಅಧಿಕಾರಿಗಳ ಸೂಚನೆಯಂತೆ ರಸ್ತೆ ಗುಣಮಟ್ಟ ತಪಾಸಣೆಗೆ ಮಂಗಳವಾರ ಆಗಮಿಸಿದ್ದ ಪ್ರತ್ಯೇಕ  ತಂಡದಲ್ಲಿ ಮಂಗಳೂರಿನ ಪಿ.ಎ.ಎಂಜಿನಿಯರಿಂಗ್ ಕಾಲೇಜಿನ ಎಂಜಿನಿಯರ್ ರಾಜೇಶ್ ರೊಡ್ರಿಗಸ್, ನಗರ ಯೋಜನಾ ಪ್ರಾಧಿಕಾರ ಮುಖ್ಯ ಎಂಜಿನಿಯರ್ ಜಿ. ಶ್ರೀಧರ, ಪುರಸಭಾ ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಮತ್ತಿತರರು ಪಾಲ್ಗೊಂಡಿದ್ದರು.
ಕಾಂಕ್ರೀಟ್ ರಸ್ತೆ ದಪ್ಪ, ಕಾಮಗಾರಿ ವೇಳೆ ಬೆರೆಸಿರುವ ಮರಳು, ಜೆಲ್ಲಿ, ಸಿಮೆಂಟ್ನ ಪ್ರಮಾಣ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲಿಸಿದ ತಂಡವು ಕೊರೆಯುವ ಯಂತ್ರ ಮೂಲಕ ರಸ್ತೆ ಬದಿ ತುಂಡು ಕತ್ತರಿಸಿ ಪ್ರಯೋಗಾಲಯ ಮೂಲಕ ತಜ್ಞರಿಂದ ಪರಿಶೀಲನೆ ನಡೆಸಲು ಕೊಂಡೊಯ್ದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *