ಮೂಡುಬಿದರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಚಿರತೆ ಹಾವಳಿ ಹೆಚ್ಚಾಗಿದ್ದು ಜನರು ರಾತ್ರಿ ಮಾತ್ರವಲ್ಲ, ಹಗಲಲ್ಲೂ ಓಡಾಡಲು ಭಯ ಪಡುತ್ತಿದ್ದಾರೆ. ಗ್ರಾಮದ ದನ-ನಾಯಿಗಳು ಚಿರತೆಗೆ ಬಲಿಯಾಗುತ್ತಿರುವುದು ಹೆಚ್ಚಾಗುತ್ತಿದೆ.
ಕಳೆದ ಹಲವಾರು ವರ್ಷಗಳಿಂದ ಪಾಲಡ್ಕ ಪರಿಸರದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿ ನಾಶವಾಗುತ್ತಿದ್ದು, ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪರಿಸರದಲ್ಲಿ ಚಿರತೆಯ ಕಾಟದಿಂದ ಜನರು ಕಂಗಾಲಾಗುತ್ತಿದ್ದಾರೆ. ಶಾಲಾ ಮಕ್ಕಳು ಶಾಲೆಗೆ ತೆರಳಲು, ಗ್ರಾಮಸ್ಥರು ಅಂಗಳಕ್ಕೆ ಇಳಿಯಲು ಭಯಪಡುತ್ತಿದ್ದಾರೆ. ಚಿರತೆಯ ಕಾಟ ಮಿತಿಮೀರುತ್ತಿದ್ದು, ಪಾಲಡ್ಕದಲ್ಲಿ ಆತಂಕ ಹೆಚ್ಚಾಗಿದೆ.
ಕಳೆದ ಸೋಮವಾರ ಕೇಮಾರು ಸಮೀಪದ ಕಡ್ತಿಮಾರ್ ಎಂಬಲ್ಲಿ ಸುಧಾಕರ ಪೂಜಾರಿ ಎಂಬವರ ಮನೆಯ ಸಮೀಪ ಹಟ್ಟಿಯಲ್ಲಿ ಕಟ್ಟಿದ ಎರಡು ದನಗಳ ಮೇಲೆ ದಾಳಿ ಮಾಡಿರುವ ಚಿರತೆ ಒಂದು ದನವನ್ನು ಕೊಂದು ಹಾಕಿ, ಇನ್ನೊಂದಕ್ಕೆ ಗಾಯ ಮಾಡಿತ್ತು. ಅಲ್ಲೇ ಸಮೀಪದ ಹೊಸಮನೆ ನೆಲ್ಲೆಕ್ಕ ಎಂಬವರ ಮನೆಯ ನಾಯಿ ಮೇಲೆ ದಾಳಿ ಮಾಡಿರುವುದರಿಂದ ಕುತ್ತಿಗೆಯಲ್ಲಿ ಗಾಯವಾಗಿದೆ. ಪಾಲಡ್ಕದ ನವೀನ್ ಎಂಬವರು ರಾತ್ರಿ ವೇಳೆ ಬೈಕ್ನಲ್ಲಿ ಬರುತ್ತಿದ್ದಾಗ ಚಿರತೆ ಎದುರಾಗಿದೆ. ಅಲ್ಲದೆ ಸ್ಥಳೀಯರೊಬ್ಬರಿಗೆ ಬಂಡೆಕಲ್ಲೊಂದರ ಮೇಲೆ ಜೋಡಿ ಚಿರತೆಗಳು ಕಾಣಸಿಕ್ಕಿದೆ. ಕಡ್ತಿಮಾರು ಪರಿಸರದ ಸುಂದರ ನಾಕ್ ಎಂಬವರ ಮನೆಯ ನಾಯಿಯನ್ನೂ ಹಿಡಿದುಕೊಂಡು ಹೋಗಿದೆ. ಕಡ್ತಿಮಾರಿನಲ್ಲಿ 20 ಮನೆಗಳಿದ್ದು ಈ ಪ್ರದೇಶ ಜನರು ಚಿರತೆಯ ಉಪಟಳದಿಂದ ತೀವ್ರವಾದ ತೊಂದರೆ ಅನುಭವಿಸುತ್ತಿದ್ದಾರೆ.
ಪೈಕೊಟ್ಟುವಿನ ನಾಟಿವೈದ್ಯೆ ಜಾನಕಿ ಎಂಬವರ ಮನೆಯಲ್ಲಿ ಡಿ.6ರಂದು ಗೃಹಪ್ರವೇಶ ನಡೆದಿದ್ದು ಡಿ.8ರಂದು ಆರ್ಸಿಸಿ ಮನೆಯ ಮೇಲೆ ಬೆಳಗ್ಗೆ ಚಿರತೆ ಕಾಣಸಿಕ್ಕಿದೆ. ಡಿ.8ರಂದು ಮುಂಜಾನೆ ಜಾನಕಿ ಅವರ ಮಗ ಮನೆಯ ಮೇಲೆ ಚಿರತೆಯಿರುವುದನ್ನು ಗಮನಿಸಿದ್ದರು. ಸ್ಥಳೀಯರು ಬೊಬ್ಬೆ ಹಾಕಿ ಚಿರತೆಯನ್ನು ಸುಮಾರು 8 ಗಂಟೆ ವೇಳೆ ಓಡಿಸಿದ್ದಾರೆ. ಮನೆಯ ಗೋಡೆಗಳ ಮೇಲೆ ಚಿರತೆಯ ಕಾಲಿನ ಗುರುತುಗಳಿವೆ. ನೆರೆಯ ಶಂಕರ್ ಎಂಬವರ ಮನೆಯ ನಾಯಿಗಳು ಚಿರತೆಗೆ ಆಹಾರವಾಗಿದೆ.
ಸಮಾಧಿಯಲ್ಲಿ ಹೆಜ್ಜೆಯ ಗುರುತು:
ಜೋಡುಕಟ್ಟೆಯ ಬಾಬು ಹಾಗೂ ಪಕ್ಕದ ಮನೆಯ ಅಗಸ್ಟಿನ್ ಎಂಬವರ ದನಗಳ ಮೇಲೂ ಗುರುವಾರ ರಾತ್ರಿ ಚಿರತೆ ದಾಳಿ ಮಾಡಿದೆ. ಅಗಸ್ಟಿನ್ ಅವರ ದನವು ನಾಪತ್ತೆಯಾಗಿದ್ದು, ಬಾಬು ಅವರ ದನವನ್ನು ಕೊಂದು ಹಾಕಿದೆ. ಸತ್ತ ದನವನ್ನು ಮನೆ ಸಮೀಪ ಹೂಳಲಾಗಿದ್ದು, ಶನಿವಾರ ನೋಡಿದಾಗ ಮಣ್ಣಿನಲ್ಲಿ ಚಿರತೆಯ ಹೆಜ್ಜೆಗಳು ಸ್ಪಷ್ಟವಾಗಿ ಕಂಡುಬಂದಿದೆ. ಚಿರತೆಯು ಇದೇ ಪರಿಸರದಲ್ಲಿ ಶುಕ್ರವಾರ ರಾತ್ರಿ ಬಂದಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ ಪೈಪ್ನ ನೀರು ಹಾಯಿಸಲು, ಅದನ್ನು ಸ್ಥಗಿತಗೊಳಿಸಲು ಹೆಚಾಗಿ ಕೃಷಿಕರು ತೋಟದ ಬಳಿ ಹೋಗುವುದು ಅನಿವಾರ್ಯ.ಆದರೆ ಚಿರತೆ ಕಾಟದಿಂದ ತೋಟ ಮಾತ್ರವಲ್ಲ ಮನೆಯ ಅಂಗಳಕ್ಕೆ ಇಳಿಯಲೂ ಪಾಲಡ್ಕ ಗ್ರಾಮಸ್ಥರು ಭಯಪಡುತ್ತಿದ್ದಾರೆ.
ಕಾಡು ಪ್ರಾಣಿ ಹಾವಳಿ: ಕೃಷಿ ಪ್ರಧಾನ ಗ್ರಾಮವಾದ ಪಾಲಡ್ಕದಲ್ಲಿ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಕಾಡು ಪ್ರಾಣಿಗಳು ದಾಳಿ ಮಾಡುತ್ತಿದ್ದು, ಕೃಷಿ ಬೆಳೆಗಳು ಹಾಳಾಗಿವೆ. ಸ್ಥಳೀಯ ಪತ್ರಕರ್ತರೊಬ್ಬರು ಶುಕ್ರವಾರ ರಾತ್ರಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಾಡುಹಂದಿ ಅಡ್ಡಬಂದಿದ್ದು, ಬೈಕ್ ಜಖಂ ಆಗಿದೆ. ಸವಾರಗೆ ಗಾಯಗಳಾಗಿವೆ.
ಮೂರು ತಿಂಗಳ ಹಿಂದೆ ಕಿನ್ನಿಗೋಳಿ ಪರಿಸರದಲ್ಲಿ ಚಿರತೆ ಕಂಡುಬಂದಿದ್ದು, ಸಿ.ಸಿ.ಟಿ.ವಿ ಮೂಲಕ ಅದರ ಹಾವಳಿಯನ್ನು ನಿಯಂತ್ರಣ ಮಾಡಲಾಗಿತ್ತು. ಆ ಬಳಿಕ ಮೂಡುಬಿದರೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಚಿರತೆ ಕಾಟ ಅಷ್ಟೊಂದು ಇರಲಿಲ್ಲ. ಇದೀಗ ಮತ್ತೆ ಪಾಲಡ್ಕ ಪರಿಸರದಲ್ಲಿ ಚಿರತೆ ಕಾಣಸಿಕ್ಕಿದೆ. ಅರಣ್ಯ ಇಲಾಖೆ ಕಡೆಯಿಂದ ಚಿರತೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದೇವೆ. ಕಳೆದ ವರ್ಷ ಕಲ್ಲಮುಂಡ್ಕೂರು ಗ್ರಾಮದಲ್ಲಿ ಚಿರತೆಯ ಮರಿ ಒಂದು ಪತ್ತೆಯಾಗಿದ್ದು, ಅದರ ತಾಯಿ ಇದಾಗಿರಬಹುದು. ಚಿರತೆಯನ್ನು ಹಿಡಿಯುವ ನಿಟ್ಟಿನಲ್ಲಿ ಪಾಲಡ್ಕ ಹಾಗೂ ಕಲ್ಲಮುಂಡ್ಕೂರು ಪರಿಸರದಲ್ಲಿ ಬೋನುಗಳನ್ನು ಇರಿಸಿದ್ದೇವೆ. ಅಲ್ಲದೆ ಅರಣ್ಯ ಸಿಬ್ಬಂದಿಗಳನ್ನೂ ಶೀಘ್ರದಲ್ಲಿ ನೇಮಿಸುವ ಕೆಲಸ ಮಾಡುತ್ತೇವೆ. ಈಗಾಗಲೇ ಮೂರು ಪ್ರಕರಣದಲ್ಲಿ ದನಗಳನ್ನು ಮಹಜಾರು ಮಾಡಿ, ಪರಿಹಾರಕ್ಕಾಗಿ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಮೂಡುಬಿದರೆ ವಲಯ ಅರಣ್ಯ ಅಧಿಕಾರಿ ಜಿ.ಡಿ.ದಿನೇಶ್ `ವಿಜಯವಾಣಿ’ ಪತ್ರಿಕೆಗೆ ತಿಳಿಸಿದ್ದಾರೆ.
ಪಾಲಡ್ಕ ಪರಿಸರದಲ್ಲಿ ಚಿರತೆ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಮ್ಮನ್ನು ಭಯಭೀತಿಗೊಳಿಸಿದೆ. ರಾತ್ರಿ ಹೊತ್ತಿನಲ್ಲಿ ಮನೆಯಿಂದ ಹೊರಗೆ ಬರಲು ಹಾಗೂ ಹಗಲಲ್ಲೂ ಅಚೀಚೆ ಓಡಾಡಲು ಹೆದರಿಕೆಯಾಗುತ್ತಿದೆ. ಅರಣ್ಯ ಇಲಾಖೆಯವರು ಚಿರತೆ ಹಿಡಿದರೆ ಮಾತ್ರ ನಾವು ನೆಮ್ಮದಿಯಿಂದಿರಬಹುದು.
-ಸುಧಾಕರ ಪೂಜಾರಿ
ಪಾಲಡ್ಕದ ಕಡ್ತಿಮಾರು ನಿವಾಸಿ
ಗ್ರಾಮದ ಅಲ್ಲಲ್ಲಿ ಚಿರತೆಗಳು ಕಂಡುಬಂದಿರುವುದರಿಂದ ನಮಗೆ ಶಾಲೆಗೆ ಹೋಗಲು ಭಯವಾಗುತ್ತಿದೆ. ಎರಡು ದಿನಗಳ ಹಿಂದೆ ನಮ್ಮ ಶಾಲೆಯ ಶಿಕ್ಷಕರು ಈ ಕಾರಣಕ್ಕಾಗಿಯೇ ತಮ್ಮ ಕಾರಿನಲ್ಲಿ ನಮ್ಮನ್ನು ಮನೆಗೆ ಬಿಟ್ಟಿದ್ದಾರೆ.
-ಲವನೀಶ್
ಕಡಂದಲೆ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆಯ ವಿದ್ಯಾಥರ್ಿ
ಯಶೋಧರ.ವಿ.ಬಂಗೇರ

