ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದ ಮೂಲಕ ಹಾದು ಹೋಗುವ ಉದ್ದೇಶಿತ ರಿಂಗ್ ರಸ್ತೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಸಾರ್ವಜನಿಕರಿಗೆ, ಅನೇಕ ಸಂಘ ಸಂಸ್ಥೆಗಳ ಸಕ್ರಿಯ ಚಟುವಟಿಕೆಗಳ ಬಹುಪಯೋಗಿ ತಾಣವಾಗಿರುವ ಈ ಮೈದಾನದಲ್ಲಿ ಯಾವುದೇ ಕಾರಣಕ್ಕೂ ರಿಂಗ್ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಇದಕ್ಕಾಗಿ ಮೂಡುಬಿದಿರೆಯಲ್ಲಿ ಡಿ 19ರಂದು ಸ್ವರಾಜ್ಯ ಮೈದಾನ ಉಳಿಸಿ ಆಂದೋಲನ ಎಂದು ಮೂಡುಬಿದಿರೆ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಅಶ್ವಿನ್ ಜೆ.ಪಿರೇರಾ ಹೇಳಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 28.98 ಎಕರೆಯ ಸ್ವರಾಜ್ಯ ಮೈದಾನವು ಹಿಂದೆ ರಕ್ಷಣಾ ಇಲಾಖೆಗೆ ಸೇರಿದ್ದಾಗಿದ್ದು ಬೆಲೆ ಬಾಳುವ ಸ್ಥಳ ಮತ್ತು ಆಗಿಂದಾಗ ಅನಧಿಕೃತ ಅತಿಕ್ರಮಣಗಳಿಗೆ ಗುರಿಯಾಗುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ 0.57 ಸ್ಥಳವನ್ನು 2007ರಲ್ಲಿ ಡಿಸಿಯವರು ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಕಟ್ಟುವ ಬಗ್ಗೆ ನೀಡಿದ್ದು ಉಳಿದ 28.35 ಎಕರೆ ಸ್ಥಳವನ್ನು 2010 ರಲ್ಲಿ ಸಂರಕ್ಷಣೆ ಮತ್ತು ಸದುಪಯೋಗ ಮಾಡುವ ಸಾರ್ವಜನಿಕ ಹಿತಾಸಕ್ತಿಯ ಸಲುವಾಗಿ ಯುವಜನ ಸೇವಾ ಕ್ರೀಡಾ ಇಲಾಖೆಗೆ ವಗರ್ಾಯಿಸಿದ್ದಾರೆ. ದೇವಾಲಯಗಳು, ಶಿಕ್ಷಣ ಹಾಗೂ ಸಂಘ ಸಂಸ್ಥೆಗಳ ಕ್ರೀಡಾ ಕೂಟಗಳು, ಯಕ್ಷಗಾನ, ಸಭೆ, ಸಮಾವೇಶಗಳು, ಇತರೆ ಕ್ರೀಡೆಗಳು, ವಾಹನ ತರಬೇತಿ, ವಾಯುವಿಹಾರ ಹೀಗೆ ಮೂಡುಬಿದಿರೆಯ ಜನತೆ ಹೆಚ್ಚು ಬಳಸುತ್ತಿರುವ ಮೈದಾನದಲ್ಲಿ ಈ ರಸ್ತೆ ಸಮಸ್ಯೆಗೆ ಕಾರಣವಾಗಲಿದೆ ಎಂದವರು ಹೇಳಿದರು.

ಬೈಪಾಸ್ ಕೊಡಿ:
ಪೇಟೆಯೊಳಗಿನ ವಾಹನ ದಟ್ಟಣೆ ನಿಯಂತ್ರಿಸಲು ರಿಂಗ್ ರೋಡ್ ಪೇಟೆಯೊಳಗೆ ಮಾಡುವುದಕ್ಕೆ ಅರ್ಥವಿಲ್ಲ, ಸ್ವರಾಜ್ಯ ಮೈದಾನದಲ್ಲಿ ರಸ್ತೆ ಮಾಡಿದರೆ ಅಲ್ಲಿ ಕ್ರೀಡಾ ಕೂಟಗಳಾಗುವಾಗ ಪಾರ್ಕಿಂಗ್ ಸ್ಥಳವೆಲ್ಲಿದೆ? ರಿಂಗ್ ರೋಡ್ನಿಂದ ಇಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಅಷ್ಟಕ್ಕೂ ಕಡಲಕೆರೆ ಗಾಂಧೀನಗರವನ್ನು ಸ್ವರಾಜ್ಯ ಮೈದಾನದ ಹಿಂದೆ ಪಟ್ಲ ಭಾಗದಿಂದ ಸಂಪರ್ಕಿಸುವ ಬೈಪಾಸ್ ಯೋಜನೆಯನ್ನೇ ಕೈಗೆತ್ತಿಕೊಂಡು ಅಭಿವೃದ್ಧಿ ಮಾಡಬಹುದು. ವಿದ್ಯಾಗಿರಿಯ ಆಸುಪಾಸಿನಲ್ಲೂ ಮೈದಾನದ ಹಿಂದೆ ಹಾದು ಹೋಗುವಂತೆ ರಿಂಗ್ ರೋಡ್ ತರಬಹುದು. ಆದರೆ ಯಾವುದೇ ಕಾರಣಕ್ಕೆ ಇನ್ನು ಮೈದಾನ ಅಗೆಯಲು ಬಿಡಲಾರೆವು . ಅದಕ್ಕಾಗಿಯೇ ಸಮಾನ ಮನಸ್ಕರ ಜತೆ, ಸಂಘ ಸಂಸ್ಥೆಗಳೆಲ್ಲ ಸೇರಿಕೊಂಡು ಡಿ 19ರಂದು ಅಪರಾಹ್ನ 2.30ರಿಂದ ಸಾವಿರ ಕಂಬದ ಬಸದಿಯಿಂದ ರಾಜೀವ ಗಾಂಧೀ ವಾಣಿಜ್ಯ ಸಂಕೀರ್ಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದವರು ವಿವರಿಸಿದರು.
ತಹಸೀಲ್ದಾರ್ ಕಛೇರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಶನಿವಾರವೇ ಮನವಿ ಸಲ್ಲಿಸಲಾಗಿದ್ದು ಸಹಿತ ಸಂಬಂಧೀ ಇಲಾಖೆಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಪ್ರತಿಗಳನ್ನು ರವಾನಿಸಲಾಗುವುದು ಎಂದು ಅಶ್ವಿನ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮೂಡುಬಿದಿರೆ ಕ್ರಿಕೆಟ್ ಅಸೋಸಿಯೇಶನ್ನ ಉಪಾಧ್ಯಕ್ಷ ಪ್ರಕಾಶ್ ಕುಂದರ್, ಆಶೋಕ್ ಕುಮಾರ್ ಆಳ್ವ, ಮಹ್ಮದ್ ಅಶ್ರಫ್, ಕಾರ್ಯದರ್ಶಿ ಅಶ್ರಫ್ ವಾಲ್ಪಾಡಿ , ಖಜಾಂಚಿ ದಿವಾಕರ ಉಪಸ್ಥಿತರಿದ್ದರು.
ಚಿತ್ರ ಲಗತ್ತಿಸಿದೆ. / ತಹಸೀಲ್ದಾರ್ ಕಛೇರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಕೆ.
