ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯ ಹದಗೆಟ್ಟ ರಸ್ತೆಗೆ ಡಿಸೆಂಬರ್ ತಿಂಗಳೊಳಗೆ ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ಲೋಕೋಪಯೋಗಿ ಇಲಾಖಾಧಿಕಾರಿಗಳು ಭರವಸೆ ನೀಡಿದ್ದಾರೆ.


ಪಾಣೆಮಂಗಳೂರು ಪೇಟೆಯಲ್ಲಿ ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನ-ಜನ ಸಂಚಾರ ದುಸ್ತರವಾಗಿರುವ ಹಿನ್ನಲೆಯಲ್ಲಿ ಇತ್ತೀಚೆಗೆ ಬಂಟ್ವಾಳ ಲೋಕೋಪಯೋಗಿ ಇಲಾಖಾಧಿಕಾರಿಗಳ ಬಳಿ ಸ್ಥಳೀಯರ ನಿಯೋಗ ಭೇಟಿ ನೀಡಿ ಮನವಿ ಸಲ್ಲಿಸಿದ ಸಂದರ್ಭ ಅಧಿಕಾರಿಗಳು ಈ ಭರವಸೆ ನೀಡಿದ್ದಾರೆ.


ಈ ಬಾರಿ ವಿಪರೀತ ಮಳೆಯಿಂದಾಗಿ ತಾಲೂಕಿನ ಹಲವು ರಸ್ತೆಗಳು ಹದಗೆಟ್ಟಿದ್ದು, ಜನ-ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದೀಗ ಮಳೆ ಕಡಿಮೆಯಾಗಿದ್ದು, ಪೊಳಲಿ ಭಾಗದಲ್ಲಿ ಸದ್ಯ ರಸ್ತೆಗುಂಡಿ ಮುಚ್ಚಿ ಸುಸ್ಥಿತಿಗೆ ತರುವ  ಕಾಮಗಾರಿ ನಡೆಯುತ್ತಿದೆ. ಅದು ಪೂರ್ಣಗೊಂಡ ತಕ್ಷಣ ಪಾಣೆಮಂಗಳೂರು ಪೇಟೆ ರಸ್ತೆಯ ಕಾಮಗಾರಿ ನಡೆಸಿ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗುವುದು ಎಂದಿದ್ದಾರೆ.


ಮಳೆಗಾಲ ಆರಂಭಕ್ಕೆ ಮೊದಲೇ ಪಾಣೆಮಂಗಳೂರು ಪೇಟೆ ರಸ್ತೆಗೆ ತೇಪೆ ಕಾಮಗಾರಿ ನಡೆಸಲು ಇಲಾಖೆ ಮುಂದಾಗಿತ್ತು. ಆದರೆ ತೇಪೆ ಕಾಮಗಾರಿ ನಡೆಸಲು ಮುಂದಾದಾಗ ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಹಾಗೆಯೇ ಉಳಿಯುವಂತಾಯಿತು. ಪೂರ್ಣಪ್ರಮಾಣದಲ್ಲಿ ಡಾಮರೀಕರಣಕ್ಕೆ ಸಂಬಂಧಪಟ್ಟಂತೆ ಇಲಾಖೆಯಲ್ಲಿ ಯಾವುದೇ ಅನುದಾನ ಲಭ್ಯತೆ ಇಲ್ಲದೆ ಇರುವುದರಿಂದ ಪ್ಯಾಚ್ ವರ್ಕ್ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಕೆಲವರ ವಿರೋಧದಿಂದ ಅದು ನೆನೆಗುದಿಗೆ ಬಿದ್ದಿತ್ತು. ಇದೀಗ ಮಳೆಗಾದಲ್ಲಿ ರಸ್ತೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದು, ಮತ್ತೆ ಸ್ಥಳೀಯರು ಪ್ಯಾಚ್ ವರ್ಕ್ ಕಾಮಗಾರಿಗೆ ಆಗ್ರಹಿಸಿದ್ದು, ತಕ್ಷಣ ಅದನ್ನು ಇಲಾಖೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ಣ ಡಾಮರೀಕರಣದ ಬಗ್ಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಮಂಜೂರಾತಿಯಾದ ಕೂಡಲೇ ಮುಖ್ಯ ರಸ್ತೆಗೆ ಪೂರ್ಣ ಡಾಮರೀಕರಣ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಇಲಾಖಾಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *