ಗುರುಪುರ : ಬದಲಾದ ಸಮಯಕ್ಕೆ ಅನುಗುಣವಾಗಿ ಕೃಷಿಯಲ್ಲಿ ಬದಲಾವಣೆಯಾಗಿದೆ. ವೈಜ್ಞಾನಿಕ ರೀತಿಯ ಕೃಷಿ ಹೆಚ್ಚು ಲಾಭದಾಯಕ. ಸರ್ಕಾರದಿಂದ ಕೃಷಿಕರಿಗೆ ಸಹಾಯ ದೊರೆಯುತ್ತಿದ್ದು, ಅವುಗಳ ಲಾಭ ಪಡೆಯಬೇಕು. ಜಿಲ್ಲೆಯಲ್ಲಿ ಭತ್ತದ ಕೃಷಿ ಕಡಿಮೆಯಾಗಿದೆ. ಇದಕ್ಕೆ ರಿಯಲ್ ಎಸ್ಟೇಟ್, ಗದ್ದೆಗಳ ಒಳ ಸಮಸ್ಯೆಗಳು ಮತ್ತು ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಇಲ್ಲದಿರುವಿಕೆ ಪ್ರಮುಖ ಕಾರಣವಾಗಿವೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.

ಕೃಷಿ ಇಲಾಖೆ ಮಂಗಳೂರು ಮತ್ತು ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇವರ ಜಂಟಿ ಆಶ್ರಯದಲ್ಲಿ ೨೦೨೫-೨೬ನೇ ಸಾಲಿನ ರಾಷ್ಟ್ರೀ ಯ ಕೃಷಿ ವಿಸ್ತರಣೆ ಉಪ ಅಭಿಯಾನ ಎಟಿಎಂಎ/ಆತ್ಮ ಯೋಜನೆಯಡಿ ಅ. ೪ರಂದು ವಾಮಂಜೂರಿನಲ್ಲಿರುವ ಸಂಘದ ಸಭಾಂಗಣದಲ್ಲಿ `ಕಿಸಾನ್ ಗೋಷ್ಠಿ’ ಉದ್ಘಾಟಿಸಿ ಮಾತನಾಡಿ, ಈಗ ಅಧಿಕ ಲಾಭ ಕೊಡುವ ಬೆಳೆಗಳತ್ತ ಕೃಷಿಕ ಮನಸ್ಸು ಮಾಡಿದ್ದಾನೆ. ಇದಕ್ಕಾಗಿ ಕೃಷಿಕರು ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆದುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಕಿಸಾನ್ ಗೋಷ್ಠಿ ಹೆಚ್ಚು ಪ್ರಯೋಜನಕಾರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಗುರುಪುರ ವ್ಯ.ಸೇ.ಸ. ಸಂಘ(ನಿ) ಇದರ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಮಾತನಾಡಿ, ಆರ್ಥಿಕ ವ್ಯವಹಾರದ ಜೊತೆಗೆ ಕೃಷಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಬ್ಯಾಂಕ್ ಕಾರ್ಯನಿರ್ವಸುತ್ತಿದೆ. ಈ ನಿಟ್ಟಿನಲ್ಲಿ ಕೃಷಿಕರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ಸರ್ಕಾರದಿಂದ ಸಿಗುವ ಸವಲತ್ತುಗಳು ಮತ್ತು ಯೋಜನೆಗಳ ಮಾಹಿತಿ ನೀಡಲೆಂದು `ಕಿಸಾನ್ ಗೋಷ್ಠಿ ಆಯೋಜಿಸಿದ್ದೇವೆ. ಇದರಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯುವಲ್ಲಿ ಕೃಷಿಕರು ತಮಗೆ ಎದುರಾಗುವ ಅಡಚಣೆ, ಕಷ್ಟ ಅಥವಾ ಅಲೆದಾಟ ತಪ್ಪಿಸಲು ಸಾಧ್ಯವಿದೆ ಎಂದರು.

ಮಂಗಳೂರು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ. ಪ್ರವೀಣ್ ತೋಟಗಾರಿಕೆಕೆ ಬಗ್ಗೆ ಮಾಹಿತಿ ನೀಡಿ ಹಣ್ಣು, ತರಕಾರಿ, ಹೂವು, ಕಾಫಿ, ರಬ್ಬರ್, ಔಷಧೀಯ ಸಸ್ಯಗಳು ತೋಟಗಾರಿಕೆ ಬೆಳೆಗಳಾಗಿವೆ. ಜಿಲ್ಲೆಯಲ್ಲಿ ಭತ್ತದ ಕೃಷಿ ಕಡಿಮೆಯಾಗಿದ್ದರೂ, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಡೆಸುವ ಕೃಷಿ ಲಾಭದಾಯಕವಾಗಿದೆ. ಆದ್ದರಿಂದ ಆ ಬಗ್ಗೆ ಕೃಷಿಕರು ಕಾಲಕಾಲಕ್ಕೆ ಕೃಷಿ ಸಂಬಂಧಿ ಮಾಹಿತಿ ಪಡೆದುಕೊಳ್ಳತಕ್ಕದ್ದು. ಜೊತೆಗೆ ತಮ್ಮ ಮಕ್ಕಳಿಗೆ ಕೃಷಿಯಲ್ಲಿ ಉನ್ನತ ಪದವಿ ಗಳಿಸುವಂತೆ ಉತ್ತೇಜಿಸಬೇಕು. ಯುವಕರು ಕೃಷಿ ವಿಜ್ಞಾನದ ಕಲಿಕೆಯತ್ತ ಮನಸ್ಸು ಮಾಡುವುದರಿಂದ ಕೃಷಿ ಕ್ಷೇತ್ರಕ್ಕೆ ಲಾಭವಿದೆ. ಕೃಷಿಗೆ ಸರ್ಕಾರದಿಂದ ವಿವಿಧ ರೀತಿಯ ಸಹಾಯ-ನೆರವುಗಳಿವೆ. ಅವುಗಳ ಪ್ರಯೋಜನ ಪಡೆಯಬೇಕು. ಕೃಷಿಕರಲ್ಲಿ ಹವಾಮಾನ, ಭೌಗೋಳಿಕ ನೆಲೆಗಟ್ಟು ಮತ್ತು ಮಣ್ಣಿನ ಬಗ್ಗೆ ಸರಿಯಾದ ಜ್ಞಾನ ಇರಬೇಕು ಎಂದು ವಿವರಿಸಿದರು.

ಮಂಗಳೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ. ಆರ್. ಸ್ವಾಗತಿಸಿದರು. ಕೃಷಿ ಇಲಾಖೆ ಉಪ-ನಿರ್ದೇಶಕಿ ಕುಮುದಾ ಎಸ್., ಅವರು ಪ್ರಸ್ತಾವಿಸಿದರು. ಸಂಘದ ಉಪಾಧ್ಯಕ್ಷ ಜಿ. ಎಂ. ಉದಯ ಭಟ್, ಸಂಘದ ನಿರ್ದೇಶಕ ಮಂಡಳಿಯ ಎಲ್ಲ ನಿರ್ದೇಶಕರು, ಮಂಗಳೂರು ಪಶು ಸಂಗೋಪನಾ ಅಧಿಕಾರಿ ಡಾ. ವೆಂಕಟೇಶ್ ಮಳವಳ್ಳಿ, ಕೃಷಿ ವಿಜ್ಞಾನಿ ಡಾ. ಹರೀಶ್ ಶೆಣೈ ಇದ್ದರು. ಸಂಘದ ಸಿಬ್ಬಂದಿ ಸಹಕರಿಸಿದರೆ, ಸಿಬ್ಬಂದಿ ಶ್ರುತಿ ವಂದಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ತಾಲೂಕಿನ ಗುರುಪುರ ಮತ್ತು ಸುರತ್ಕಲ್ ಹೋಬಳಿಯಲ್ಲಿ ಭತ್ತದ ಬೆಳೆಯಲ್ಲಿ ಅಧಿಕ ಇಳುವರಿ ಪಡೆದಿರುವ ರೈತರಿಗೆ ಸನ್ಮಾನ, ಆತ್ಮ ಕೃಷಿ ಯೋಜನೆಯ ಕೃಷಿಕರಿಗೆ ಸನ್ಮಾನ, ಕೃಷಿಕರಿಗೆ ಸವಲತ್ತುಗಳು ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು

By suddi9

Leave a Reply

Your email address will not be published. Required fields are marked *