ಬಂಟ್ವಾಳ: ತಾಲೂಕು ಕೃಷಿ ಕಚೇರಿ ಬಳಿ ಬಂಟ್ವಾಳ ತಾಲೂಕು ಕೃಷಿಕ ಸಮಾಜದ ವತಿಯಿಂದ ಸುಮಾರು 1 ಕೋ.ರೂ.ವೆಚ್ಚದಲ್ಲಿ ನಿರ್ಮಿಸಿರುವ” ಕೃಷಿಕ ಸಮಾಜ ಭವನ” ಲೋಕಾರ್ಪಣೆ ಕಾರ್ಯಕ್ರಮವು ಸೆ.1 ರಂದು ನಡೆಯಲಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಅವರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಸ್ಪೀಕರ್ ಯು.ಟಿ.ಖಾದರ್ ಅವರ ಉಪಸ್ಥಿತಿಯಲ್ಲಿ ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಭವನವನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಲಿದ್ದಾರೆ.ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಮಂಜುನಾಥ ಗೌಡ ಎಸ್ .ಆರ್.ಸಹಿತ ಶಾಸಕರು,ಅಧಿಕಾರಿಗಳು,ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭ ಜಿಲ್ಲಾ ಮಟ್ಟದ ಭತ್ತಬೆಳೆ ಸ್ಪರ್ಧೆಯಲ್ಲಿ ಕೃಷಿವಿಜೇತ ಮಹಿಳೆಯರಿಬ್ಬರನ್ನು ಸನ್ಮಾನಿಸಲಾಗುವುದಲ್ಲದೆ ತಾಲೂಕಿನ ಕೃಷಿಸಖಿ,ಪಶು ಸಖಿಯರಿಗೆ ಅಭಿನಂದಿಸಲಾಗುವುದು ಎಂದು ವಿವರಿಸಿದ ಅವರು ಕಟ್ಟಡ ಉದ್ಘಾಟನೆಯ ಬಳಿಕ ತಾಲೂಕುಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ ಎಂದರು.
ರಾಜ್ಯ ಕೃಷಿಕ ಸಮಾಜ ಕಟ್ಟಡ ನಿರ್ಮಾಣಕ್ಕೆ 27.50 ಲಕ್ಷ ಅನುದಾನ ಒದಗಿಸಿದ್ದು,ಉಳಿದಂತೆ ವಿವಿಧ ಮೂಲಗಳಿಂದ ಹಣವನ್ನು ಬಳಸಿಕೊಂಡು ಮೊದಲ ಹಂತದ ಕಟ್ಟಡವನ್ನು ನಿರ್ಮಿಸಲಾಗಿದೆ.ಕೃಷಿಕ ಸಮಾಜದ ಸದಸ್ಯರ ಒತ್ತಾಯದ ಮೇರೆಗೆ ಮೊದಲ ಹಂತದ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಉಳಿದಂತೆ ಅನುದಾನ ಬಂದಂತೆ ಕಟ್ಟಡದ ಮುಂದುವರಿದ ಭಾಗವನ್ನು ನಿರ್ಮಿಸಲಾಗುವುದು ಎಂದು ಕಟ್ಟಡ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಕಲ್ಲಡ್ಕ ಅವರು ತಿಳಿಸಿದರು.
ಕೃಷಿಕ ಸಮಾಜದಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಾಗಾರ,ಕೃಷಿ ಇಲಾಖೆಯಿಂದ ಸವಲತ್ತು ಒದಗಿಸುವುದಲ್ಲದೆ ಕೃಷಿ ಇಲಾಖೆ ಮತ್ತು ರೈತರ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ ಎಂದ ಅವರು ಕಾರಣಾಂತರಗಳಿಂದ ಕಳೆದ 10ವರ್ಷಗಳಿಂದ ಕೃಷಿಕ ಸಮಾಜಕ್ಕೆ ಚುನಾವಣೆ ನಡೆದಿಲ್ಲ ಎಂದರು.
ಕೃಷಿಕ ಸಮಾಜದ ಪದಾಧಿಕಾರಿಗಳಾದ ಉಮ್ಮರ್ ಬಿ.,ಆಲ್ಬಟ್೯ ಮಿನೇಜಸ್,ರಮಾನಾಥ ವಿಟ್ಲ,ಗಣೇಶ್ ಶೆಟ್ಟಿ ಗೋಳ್ತಮಜಲು,ಬದ್ರುದ್ದೀನ್ ಮಂಚಿ,ರಮೇಶ್ ನೆಟ್ಲ ಉಪಸ್ಥಿತರಿದ್ದರು.
