ಪಡುಪೆರಾರ ಗ್ರಾ. ಪಂಚಾಯತ್ಗೆ ತಂಬಾಕು ಮುಕ್ತ ಗ್ರಾಮ ಗೌರವ
ಕೈಕಂಬ: ಮೂಡುಪೆರಾರ ಮತ್ತು ಪಡುಪೆರಾರ ಗ್ರಾಮಗಳನ್ನೊಳಗೊಂಡ ಪಡುಪೆರಾರ ಗ್ರಾಮ ಪಂಚಾಯತ್‌ನ ಪಡುಪೆರಾರ' ಗ್ರಾಮವು ತಂಬಾಕು ಮುಕ್ತ ಗ್ರಾಮ’ ಎಂದು ಘೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಉಗ್ಗಪ್ಪ ಮೂಲ್ಯ ಹಾಗೂ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಗೌಡ ಅವರಿಗೆ ಆ. ೨೦ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಗೌರವಿಸಿತು.

ಆ. ೨೦ರಂದು ಮಂಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೆಹಲಿಯ ತಂಬಾಕು ಮುಕ್ತ ಗ್ರಾಮದ ತಾಂತ್ರಿಕ ಸಲಹೆಗಾರ ಡಾ. ನವೀನ್ ಚೌವಾಣ್ ಅವರು ಪ್ರಶಸ್ತಿ ಪತ್ರ ವಿತರಿಸಿದರು. ಬೆಂಗಳೂರಿನ ಭಾರತೀಯ ರಾಜ್ಯ ತಂಬಾಕು ವ್ಯಸನ ಮುಕ್ತ ವಿಭಾಗದ ಅಧಿಕಾರಿ ರಾಜೇಶ್, ಜಿಲ್ಲಾ ತಂಬಾಕು ಮುಕ್ತ ಕೋಶ ಕಾರ್ಯಕ್ರಮಗಳ ಅಧಿಕಾರಿ ನವೀನ್ ಹಾಗೂ ಜಿಲ್ಲಾ ಕೋಶದ ಸಿಬ್ಬಂದಿ ಇದ್ದರು.
ಜೂನ್ ೧೭ರಂದು ಪಡುಪೆರಾರ ಗ್ರಾಮ ಪಂಚಾಯತ್‌ನ ಒಂದು ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವೆಂದು ಘೋಷಿಸಲಾಗಿತ್ತು. ನಂತರದಲ್ಲಿ ಇದಕ್ಕೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡುಪೆರಾರ ಗ್ರಾಮವು ಪ್ರಥಮ ತಂಬಾಕು ಮುಕ್ತ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.



