ಕೈಕಂಬ : ಮಂಗಳೂರು ತಾಲೂಕಿನ ಬಡಗುಳಿಪಾಡಿ ಗ್ರಾಮದ ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ(ಜೋಗಿ ಮಠ) ಇದರ ಆಡಳಿತ ಮಂಡಳಿಯ ಸಹಕಾರದಲ್ಲಿ ಆ. ೧೭ರಂದು ಶ್ರೀ ಕ್ಷೇತ್ರ ಮಟ್ಟಿಯಲ್ಲಿ ನಾಥ ಪಂಥ ಜೋಗಿ ವಧು ವರರ ವೇದಿಕೆಯು(೨೦೨೫) ೩ನೇ ರಾಷ್ಟ್ರ ಮಟ್ಟದ `ವಧು ವರರ ಪರಿಚಯ’ ಕಾರ್ಯಕ್ರಮ ಆಯೋಜಿಸಿತು.

ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಮಟ್ಟಿಯ ಅರ್ಚಕ ಹಾಗೂ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಉಮೇಶ್‌ನಾಥ್ ಕದ್ರಿ ಮಾತನಾಡಿ, ಜೋಗಿ ಸಮಾಜ ಬಾಂಧವರಿಗೆ ಇಂದು ಸುದಿನ. ರಾಷ್ಟ್ರ ಮಟ್ಟದಲ್ಲಿ ಒಂದೇ ವೇದಿಕೆಯಲ್ಲಿ ಜೋಗಿ ಸಮಾಜದ ವಧು ವರರ ಅನ್ವೇಷಣೆ ಅಥವಾ ಪರಿಚಯ ಮಾಡಿಕೊಳ್ಳುವ ಪ್ರಯತ್ನ ಇದಾಗಿದೆ. ಸಮಾಜ ಬಾಂಧವರು ಸಂಕುಚಿತ ಭಾವನೆಯಿಂದ ಹೊರಬಂದು ಒಗ್ಗಟ್ಟು ಪ್ರದರ್ಶಿಸಬೇಕು. ಎಲ್ಲರಿಗೂ ಶ್ರೀ ಮಂಜುನಾಥ, ಶ್ರೀ ಕಾಲಭೈರವನ ಕೃಪೆ ಇರಲಿ ಎಂದು ಹಾರೈಸಿದರು.
ಡಾ. ಶಿವರಾಮ ಕಾರಂತ ಟ್ರಸ್ಟ್ ಇದರ ಅಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಜೋಗಿ ಅಥವಾ ಇನ್ನಿತರ ಸಮಾಜದ ಚರಿತ್ರೆ, ಸಂಸ್ಕೃತಿ, ಆಚಾರ-ವಿಚಾರ, ನಡೆದು ಬಂದ ಪರಂಪರೆಯ ಬಗ್ಗೆ ತಮ್ಮ ಮಕ್ಕಳಿಗೆ, ಯುವಜನರಿಗೆ ತಿಳಿಸುವ ಪ್ರಯತ್ನವಾಗಬೇಕು. ಎಲ್ಲ ಸಮಾಜದಲ್ಲೂ ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ವಧು ವರರ ಅನ್ವೇಷಣೆ ಕಾರ್ಯಕ್ರಮಗಳು ನಡೆಯಬೇಕು. ಆಗ ಮಾತ್ರ ತಮ್ಮ ಮಕ್ಕಳಿಗೆ ವಿದ್ಯಾರ್ಹತೆ, ಉದ್ಯೋಗಾರ್ಹತೆಗೆ ತಕ್ಕುದಾಗ ವಧೂವರರ ಅನ್ವೇಷಣೆ ಸುಲಭ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಅಧ್ಯಯನಗಳು ನಡೆಯುವ ಅಗತ್ಯವಿದೆ ಎಂದರು.
ಹೋಟೆಲ್ ಉದ್ಯಮಿ ಹರಿರಾವ್ ಕೈಕಂಬ, ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ, ವಿಹಿಂಪ ಮಂಗಳೂರು ಅಧ್ಯಕ್ಷ ಎಚ್. ಕೆ. ಪುರುಷೋತ್ತಮ, ಗಣನಾಥ ಭಂಡಾರಿ ಮಟ್ಟಿ ಹೊಸಮನೆ, ಶ್ರೀ ಕ್ಷೇತ್ರ ಮಟ್ಟಿ ಇದರ ಆಡಳಿತ ಸಮಿತಿ ಕಾರ್ಯದರ್ಶಿ ಹರೀಶ್ ಮಟ್ಟಿ ವಧು ವರರ ಪರಿಚಯ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಶ್ರೀ ಕ್ಷೇತ್ರ ಮಟ್ಟಿ ಇದರ ಆಡಳಿತ ಮೊಕ್ತೇಸರ ಕೆ. ಗಂಗಾಧರ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ರೂವಾರಿ ಡಾ. ಪೂರ್ಣಿಮಾ ಜೋಗಿ ಅವರು ಸ್ವಾಗತಿಸಿ ಪ್ರಸ್ತಾವಿಕ ಮಾತನ್ನಾಡಿ, ವಧು ವರರ ಪರಿಚಯ ಮಾಡಿಕೊಟ್ಟರು.
ಅಲೆಮಾರಿ ಅರೆಅಲೆಮಾರಿ ಒಕ್ಕೂಟ(ರಿ) ಇದರ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿಯದೊಟ್ಟು, ಶಿವಮೊಗ್ಗ ಜೋಗಿ ಸಮಾಜದ ಅಧ್ಯಕ್ಷ ತೋಟಪ್ಪ ಜೋಗಿ, ಕರ್ನಾಟಕ ಜೋಗಿ ಸಮಾಜದ ಅಧ್ಯಕ್ಷ ಕಿರಣ್ ಜೋಗಿ, ಪ್ರಗತಿಪರ ಕೃಷಿಕ ಭೋಜ ಮೇಂಡ, ಶಂಕರ್ ಜೋಗಿ ಕುಪ್ಪೆಪದವು, ವಿಶ್ವನಾಥ ಪೂಜಾರಿ ಮಟ್ಟಿ ಪಡೀಲ್, ಮಂಗಳೂರು ನಾರಾಯಣ ಗುರು ಬಿಲ್ಲವ ಸಮಾಜ ಅಧ್ಯಕ್ಷ ಕೇಶವ ಪೂಜಾರಿ ಮಟ್ಟಿ, ರತ್ನಾಕರ ಜೋಗಿ, ವಿನೋದ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಉದ್ಯಮಿ ಸತೀಶ್ ಜೋಗಿ ಮಾಲೆಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಜೋಗಿ ಸಮಾಜದ ನೂರಾರು ಮಂದಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ತಾಲೂಕು ಹಾಗೂ ಉಡುಪಿ, ಶಿವಮೊಗ್ಗ, ದಾವಣಗೆರೆ, ಮಡಿಕೇರಿ, ಕಾಸರಗೋಡು ಮತ್ತಿತರ ಜಿಲ್ಲೆಗಳಿಂದ ವಧು ವರರ ಸಹಿತ ಅವರ ಕುಟುಂಬಿಕರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು ೧೦೦ಕ್ಕೂ ಅಧಿಕ ಮಂದಿ ವಧೂವರರು ನೋಂದಾವಣೆ ಮಾಡಿಕೊಂಡರು.
