ಮಕ್ಕಳು ಮೊಬೈಲ್ ಮತ್ತು ಟಿ.ವಿ ಹೆಚ್ಚು ಬಳಸದಂತೆ ಎಚ್ಚರ ವಹಿಸಿ ಡಾ.ಪ್ರಭಾಕರ ಭಟ್ ಕರೆ
ಬಂಟ್ವಾಳ: ಮಕ್ಕಳ ಹಿತ ದೃಷ್ಟಿಯಿಂದ ಮೊಬೈಲ್ ಮತ್ತು ಟಿ.ವಿ ಹೆಚ್ಚು ಬಳಸದಂತೆ ಪೋಷಕರು ಎಚ್ಚರ ವಹಿಸುವುದರ ಜೊತೆಗೆ ಮಕ್ಕಳ ಶಾಲೆಯ ಚಟುವಟಿಕೆಯ ಬಗ್ಗೆಯು ಗಮನಿಸಿ, ಶಾಲೆಯೊಂದಿಗೆ ಸಂಪರ್ಕವನ್ನು ಹೊಂದಿರಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ತಿಳಿಸಿದ್ದಾರೆ.

ಮಂಗಳವಾರ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ೧ರಿಂದ ೭ನೇ ತರಗತಿಯ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಕ್ಕಳ ವೈಯಕ್ತಿಕ ಸ್ವಚ್ಛತೆಯ ಬಗ್ಗೆಯು ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ನಮ್ಮ ಜೀವನದ ಶೈಲಿ ಚೆನ್ನಾಗಿರಬೇಕು. ಇಡೀ ರಾಜ್ಯದಲ್ಲಿಯೇ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳ ಬಗ್ಗೆ ಹೆಮ್ಮೆಯಿದೆ ಎಂದ ಅವರು ಇದನ್ನು ಉಳಿಸಿಕೊಳ್ಳುವಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರವು ಮಹತ್ತರವಾಗಿದೆ ಎಂದು ತಿಳಿಸಿದರು.ಈ ಸಂದರ್ಭ ಪೋಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಕಾರ್ಯಕ್ರಮದ ಮೋದಲಿಗೆ ವಿದ್ಯಾರ್ಥಿಗಳಿಂದ ಪೋಷಕರಿಗೆ ರಕ್ಷೆಧಾರಣೆ ನಡೆಯಿತು.

ವೇದಿಕೆಯಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರು ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕ ರಮೇಶ್, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯೆ ಮಲ್ಲಿಕಾ ಆರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಸಹಮುಖ್ಯೋಪಾಧ್ಯಾಯರಾದ ಸುಮಂತ್ ಎಮ್ ಆಳ್ವ ಸ್ವಾಗತಿಸಿ, ಅಧ್ಯಾಪಕರಾದ ಚೈತ್ರ ಎನ್ ಕೆ ನಿರೂಪಿಸಿದರು, ಅನ್ನಪೂರ್ಣ ವಂದಿಸಿದರು.



