ಲಖ್ನೌ : ಕೋಮುಗಲಭೆಗೆ ಹೆಸರಾಗಿರುವ ಮುಜಾಫರ್ ನಗರದಲ್ಲಿ ಮುಸ್ಲಿಂ ಯುವತಿಯೋರ್ವಳು ಹಿಂದೂ ಹುಡುಗನನ್ನು ಪ್ರೀತಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದು ಮುಸ್ಲಿಂ ಮತಾಂಧರ ಕಣ್ಣು ಕೆಂಪಾಗಿಸಿದ್ದು, ಗಲಭೆಗೆ ಕಾರಣವಾಗಿದೆ.
ಈಶ್ವರ್ ಸಿಂಗ್ ಎಂಬಾತನನ್ನು ಪ್ರೀತಿಸಿದ್ದ ಅನ್ಯ ಧರ್ಮೀಯ ಯುವತಿ ನ.3ರಂದು ಆತನೊಂದಿಗೆ ವಿವಾಹವಾಗಿದ್ದಳು, ಈ ಮೂಲಕ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಳು. ಈ ಪ್ರಕರಣ ಇದೀಗ ಕೋಮುಸೌಹಾರ್ದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವಾಗಿರುವ ಮುಜಾಫರ್ ನಗರಲ್ಲಿ ವಿವಾದಕ್ಕೆ ಕಾರಣವಾಗಿದೆ. 
ಮತಾಂತರಗೊಂಡಿರುವ ಯುವತಿ ತಮಗೆ ರಕ್ಷಣೆ ನೀಡಬೇಕೆಂದು ಅಲಹಾಬಾದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಪೊಲೀಸ್ ರಕ್ಷಣೆ ನೀಡಲಾಗಿದೆ. ಇದೇ ವೇಳೆ ಯುವತಿ ತಾನು ವಿವಾಹವಾಗಿರುವ ಯುವಕನೊಂದಿಗೆ ಇರಲು ಸ್ವತಂತ್ರಳು ಎಂದು ಕೋರ್ಟ್ ತೀರ್ಪು ನೀಡಿದೆ.
ಮುಜಾಫರ್ ನಗರದ ಚಪಾರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಾದ್ಯಂತ ಹೆಚ್ಚುವರಿ ಪೊಲೀಸ್ ಪೇದೆಗಳನ್ನು ನಿಯೋಜಿಸುವ ಮೂಲಕ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಉತ್ತರ ಪ್ರದೇಶದಲ್ಲಿ 57 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಚರ್ಚೆ ನಡೆಯುತ್ತಿರಬೇಕಾದರೆ ಈ ಪ್ರಕರಣ ನಡೆದಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.
ಮುಸ್ಲಿಮರನ್ನು ಆಮಿಷವೊಡ್ಡುವ ಮೂಲಕ ಹಿಂದೂ ಧರ್ಮಕ್ಕೆ ಮತ್ತೆ ಮತಾಂತರಗೊಳಿಸಲಾಗುತ್ತಿದೆ ಎಂದು ಸಂಸತ್ ನಲ್ಲಿ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದೂ ಮಾಯಾವತಿ ಸೇರಿದಂತೆ ಉತ್ತರ ಪ್ರದೇಶದ ಹಲವು ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದವು.
