ಪೊಳಲಿ: ನಶಿಸಿ ಹೋಗುತ್ತಿರುವ ಗ್ರಾಮೀಣ ಆಚರಣೆಗಳು ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಹಚ್ಚಹಸಿರಾಗಿ ಉಳಿಯಬೇಕಾದರೆ ಕೆಸರಿನಲ್ಲಿ ಗೌಜಿ ಮುಂತಾದ ಕಾರ್ಯಕ್ರಮಗಳ ಆಚರಣೆ ಅತಿ ಅವಶ್ಯಕವಾಗಿರುತ್ತದೆ ಎಂದು ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಆಚರಿಸಿದ ಕೆಸರುದ ಗೌಜಿ ಎನ್ನುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮುಖ್ಯ ಶಿಕ್ಷಕರಾದ ಸುಬ್ರಾಯ ಪೈ ಎನ್ ಹೇಳಿದರು.

ಅವರು ಶನಿವಾರ ವಿದ್ಯಾರ್ಥಿಗಳಿಗಾಗಿ ವಿವಿಧ ಮನರಂಜನ ಕ್ರೀಡೆಗಳಾದ ಕೆಸರಿನಲ್ಲಿ ಓಟ, ಹಿಮ್ಮುಖ ಓಟ, ಉಪ್ಪು ಮೂಟೆ ಓಟ, ಹಗ್ಗ ಜಗ್ಗಾಟ, ಕಬಡ್ಡಿ, ವಾಲಿಬಾಲ್, ಥ್ರೋ ಬಾಲ್ ಹಮ್ಮಿಕೊಂಡು ವಿದ್ಯಾರ್ಥಿಗಳನ್ನುದ್ದೇಶಿಸಿ ಪಠ್ಯಪುಸ್ತಕದೊಂದಿಗೆ ಸಹಪಠ್ಯ ಚಟುವಟಿಕೆಯು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಅಗತ್ಯವಾಗಿರುತ್ತದೆ ಎಂದರು.

ಶಾಲೆಯ ದೈಹಿಕ ಶಿಕ್ಷಕರಾದ ಜಯಂತ್ ಆಚಾರ್ಯರ ಮಾರ್ಗದರ್ಶನದಲ್ಲಿ ಮತ್ತು ಹಳೆ ವಿದ್ಯಾರ್ಥಿಗಳ ತುಂಬು ಸಹಕಾರದಲ್ಲಿ ಗ್ರಾಮೀಣ ಕ್ರೀಡಾಕೂಟವು ಯಶಸ್ವಿಯಾಗಿ ನೆರವೇರಿತು. ಆಗಮಿಸಿದ ಸರ್ವರಿಗೂ ಒಣಶುಂಠಿ ಕಾಳು ಮೆಣಸು ಬೆಲ್ಲದಿಂದ ತಯಾರಿಸಿದ ಪಾನಕವನ್ನು ನೀಡಲಾಯಿತು.

ಈ ಕ್ರೀಡಾಕೂಟವನ್ನು ಹೆತ್ತವರು ಊರವರು ಪೋಷಕರು ಕಣ್ತುಂಬಿ ಕೊಂಡರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಸದಸ್ಯರಾದ ಯಶವಂತ ಪೂಜಾರಿ ಆಗಮಿಸಿ ಶುಭ ಹಾರೈಸಿದರು. ಸರಕಾರಿ ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಎತ್ತವರು ಉಪಸ್ಥಿತರಿದ್ದು ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
