ಸುದ್ದಿ9 ವಿಶೇಷ : ರಾಜರಾಜೇಶ್ವರಿ ಅಮ್ಮನ ಸನ್ನಿಧಾನದಲ್ಲಿ ಕಲ್ಲಂಗಡಿ ಹಣ್ಣು ಪ್ರಸಾದ; ಪೊಳಲಿಗೂ ಕಲ್ಲಂಗಡಿ ಹಣ್ಣಿಗೂ ಇರುವ ನಂಟೇನು? ಇಲ್ಲಿದೆ ಮಾಹಿತಿ

ಕರ್ನಾಟಕದಲ್ಲಿ ಹಲವಾರು ಇತಿಹಾಸ ಪ್ರಸಿದ್ಧ ಹಾಗೂ ಪೌರಾಣಿಕ ಹಿನ್ನಲೆಯುಳ್ಳ ದೇವಾಲಯವಿದೆ. ಅಂತಹ ದೇವಾಲಯಗಳಲ್ಲಿ ಒಂದು ಇತಿಹಾಸ ಪ್ರಸಿದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನ. ಇದೇ ಮಾರ್ಚ್ ತಿಂಗಳ 14 ರಿಂದ ಜಾತ್ರಾ ಮಹೋತ್ಸವವು ಆರಂಭವಾಗಲಿದ್ದು, ಈ ಪೊಳಲಿ ಜಾತ್ರೋತ್ಸವದ ಪ್ರಮುಖ ಆಕರ್ಷಣೆ ಪೊಳಲಿಯ ಕಲ್ಲಂಗಡಿ ಹಣ್ಣುಗಳಾಗಿವೆ. ಹಾಗಾದರೆ ಪೊಳಲಿ ಜಾತ್ರೋತ್ಸವಕ್ಕೂ ಕಲ್ಲಂಗಡಿ ಹಣ್ಣಿಗೂ ಏನು ಸಂಬಂಧ? ಏನಿದರ ವಿಶೇಷತೆ? ಎನ್ನುವ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಹೌದು, ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಈ ಪೊಳಲಿ ಕ್ಷೇತ್ರದಲ್ಲಿ ಕಲ್ಲಂಗಡಿ ಹಣ್ಣೇ ಪ್ರಸಾದವಾಗಿರುತ್ತದೆ. ಇಲ್ಲಿ ಮಾರ್ಚ್‌ನಿಂದ ಎಪ್ರಿಲ್‌ವರೆಗೆ ನಡೆಯುವ ಒಂದು ತಿಂಗಳ ಜಾತ್ರೆಯ ವೇಳೆಯಲ್ಲಿ ಕಲ್ಲಂಗಡಿ ಮಾರಾಟವಾಗುತ್ತದೆ. ಅದನ್ನು ಭಕ್ತರು ಪೊಳಲಿಯ ಪ್ರಸಾದವೆಂದೇ ಭಾವಿಸಿ ಖರೀದಿ ಮಾಡುವುದು ವಿಶೇಷ.
ಕಲ್ಲಂಗಡಿಯನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುವುದರ ಹಿಂದೆ ಒಂದು ಪೌರಾಣಿಕ ಕಥೆಯಿದ್ದು, ಶ್ರೀದೇವಿ ಚಂಡಮುಂಡ ದೈತ್ಯರ ಶಿರಸ್ಸನ್ನು ಕಡಿದ ದ್ಯೋತಕವಾಗಿ ಆಚರಿಸುವ ಸಂಪ್ರದಾಯ ಎನ್ನಲಾಗಿದೆ. ಕಲ್ಲಂಗಡಿಯನ್ನು ಚಂಡಮುಂಡರ ಶಿರಗಳಿಗೆ ಹೋಲಿಸಲಾಗಿದ್ದು ಇವತ್ತಿಗೂ ಇಲ್ಲಿನ ಜನರು ಇದನ್ನು ನಂಬಿಕೊಂಡು ಬರುತ್ತಿದ್ದಾರೆ. ಹೀಗಾಗಿ ಪೊಳಲಿಗೂ ಕಲ್ಲಂಗಡಿಗೂ ಅವಿನಾಭಾವ ಸಂಬಂಧವಿದೆ ಎನ್ನಬಹುದು.
ಈ ಜಿಲ್ಲೆಯಲ್ಲಿರುವ ಬಂಟ್ವಾಳ ತಾಲೂಕಿನ ಸಮೀಪದ ಪೊಳಲಿಯಲ್ಲಿ ರೈತರು ಸಾಂಪ್ರದಾಯಿಕವಾಗಿ ಕಲ್ಲಂಗಡಿ ಕೃಷಿಯನ್ನು ಮಾಡುತ್ತಾ ಬರುತ್ತಿದ್ದಾರೆ. ಇದು ವೃತ್ತಿಯಾಗಿ ಮಾಡದೇ, ಹವ್ಯಾಸವಾಗಿ ಕೇವಲ ಜಾತ್ರಾ ಸಮಯದಲ್ಲಿ ಮಾತ್ರ ಕಲ್ಲಂಗಡಿಯನ್ನು ಬೆಳೆದು ಮಾರಾಟ ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಭತ್ತವನ್ನು ಬೆಳೆಯಲಾಗುತ್ತದೆ.
ಅದಲ್ಲದೇ, ಪೊಳಲಿಯ ಜೀವನದಿ ಪಲ್ಗುಣಿ ನದಿಯು ಅದರ ಸುತ್ತಮುತ್ತಲಿನ ಮರಳು ಮಣ್ಣಿನ ಕಾರಣದಿಂದಾಗಿ ಕಲ್ಲಂಗಡಿ ಬೆಳೆಯಲು ಯೋಗ್ಯವಾಗಿದ್ದು ಇದನ್ನು ಬೆಳೆಯಲಾಗುತ್ತದೆ. ವಿಭಿನ್ನ ರೀತಿಯ ಕಲ್ಲಂಗಡಿಗಳನ್ನು ಬೆಳೆಯುವ ಅವಧಿಯನ್ನು ಲೆಕ್ಕ ಹಾಕಿ, ಪೊಳಲಿ ಜಾತ್ರೆ ಯಾವ ದಿನ ಬರುತ್ತದೆ, ಅದಕ್ಕೆ ಅನುಸಾರವಾಗಿ ಬೀಜವನ್ನು ಹಾಕಿ ಕಲ್ಲಂಗಡಿ ಹಣ್ಣನ್ನು ಬೆಳೆಯುತ್ತಾರೆ. ಜಾತ್ರೆಯ ಸಮಯದಲ್ಲಿ ಎಲ್ಲಿ ಫಸಲು ಬರುತ್ತದೆ. ಧಾರ್ಮಿಕ ನಂಬಿಕೆಯೊಂದಿಗೆ ಕಲ್ಲಂಗಡಿ ಹಣ್ಣನ್ನು ಬೆಳೆದು ಪ್ರಸಾದವಾಗಿ ನೀಡುತ್ತಿರುವುದು ನಿಜಕ್ಕೂ ವಿಶೇಷವಾಗಿದೆ.