ಪ್ರಧಾನಿ ಮೋದಿ ಹಾಡಿ ಹೊಗಳಿದ ಸೋಲಿಗರ ಗ್ರಾಮಕ್ಕೆ 76 ವರ್ಷದ ಬಳಿಕ ಬಂತು ವಿದ್ಯುತ್ ಸಂಪರ್ಕ

ಈ ಸೋಲಿಗರ ಹಾಡಿ ಈವರೆಗೂ ವಿದ್ಯುತ್ ಸಂಪರ್ಕ ಇಲ್ಲದೆ ಅಂಧಕಾರದಲ್ಲಿ ಮುಳುಗಿತ್ತು. ಮಹದೇಶ್ವರ ಬೆಟ್ಟದ ಅರಣ್ಯದೊಳಗೆ 75 ಕ್ಕೂ ಹೆಚ್ಚು ಸೋಲಿಗರು ಇರುವ ಈ ಹಾಡಿಗೆ ಸ್ವಾಂತಂತ್ರ್ಯ ದೊರೆತು 76 ವರ್ಷದ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಟ್ಟ ಕಡೆಯ ಗ್ರಾಮ ಪಾಲಾರ್ನಲ್ಲಿರುವ ಸೋಲಿಗರ ಹಾಡಿ. ವಿದ್ಯುತ್ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆಯ ನಿಯಮಾವಳಿ ಅಡ್ಡಿಯಾಗಿತ್ತು. ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ವಿದ್ಯುತ್ ಸಂಪರ್ಕ ಈ ಗ್ರಾಮಕ್ಕೆ ಇರಲಿಲ್ಲ.
ಮಹದೇಶ್ವರ ಬೆಟ್ಟಕ್ಕೆ ಕಾವೇರಿ ನದಿಯಿಂದ ನೀರು ಪೂರೈಸಲು ಅಳವಡಿಸಲಾಗಿದ್ದ ವಿದ್ಯುತ್ ಮಾರ್ಗದಿಂದ ಪ್ರತ್ಯೇಕ ಟಿಸಿ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್, ಮಹದೇವಪ್ಪ ಶಾಸಕರಾದ ಮಂಜುನಾಥ್, ಕೃಷ್ಣಮೂರ್ತಿ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡುವ ಮೂಲಕ ಗ್ರಾಮಕ್ಕೆ ವಿದ್ಯುತ್ ಬೆಳಕು ಹರಿದಿದೆ. ಬಿಆರ್‌ಟಿ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಲು ಸೋಲಿಗ ಬುಡಕಟ್ಟು ಜನಾಂಗದವರ ಕೊಡುಗೆ ಗಣನೀಯವಾಗಿದೆ ಎಂದು ಕಳೆದ ತಿಂಗಳ ಮನ್ ಕಿ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದರು.