ಬಂಟ್ವಾಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಾಶಿವರಾತ್ರಿಗೆ “ದ್ವಾದಶ ಜ್ಯೋತಿರ್ಲಿಂಗ” ಪ್ರದರ್ಶನ

ಬಂಟ್ವಾಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬೈಪಾಸ್ ಬಿ.ಸಿ.ರೋಡು ಶಾಖೆಯ ಅಶ್ರಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪ್ರಸಿದ್ಧ “ದ್ವಾದಶ ಜ್ಯೋತಿರ್ಲಿಂಗ” ಪ್ರದರ್ಶನವು ಫೆ.23 ರಿಂದ 28 ರ ವರೆಗೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಸಮೀಪ ಆಯೋಜಿಸಲಾಗಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯ ಬಿ.ಸಿ.ರೋಡು ಶಾಖೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಸಾವಿತ್ರಿ ಅಕ್ಕನವರು ತಿಳಿಸಿದ್ದಾರೆ.
ಶುಕ್ರವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬಿ.ಸಿ.ರೋಡು ಶಾಖೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಫೆ. 23 ರಂದು ಸಂಜೆ 5 ಗಂಟೆಗೆ ಶ್ರೀಧಾಮ ಮಾಣಿಲದ ಶ್ರೀ ಮೋಹನ್ ದಾಸ ಸ್ವಾಮೀಜಿ ಅವರು”ದ್ವಾದಶ ಜ್ಯೋತಿರ್ಲಿಂಗ” ಪ್ರದರ್ಶನವನ್ನು ಉದ್ಘಾಟಿಸಲಿದ್ದು,ಮಾಜಿ ಸಚಿವ ರಮಾನಾಥ ರೈ,ಡಿವೈಎಸ್ಪಿ ವಿಜಯಪ್ರಸಾದ್,ತಹಶೀಲ್ದಾರ್ ಡಿ.ಅರ್ಚನಾ ಭಟ್ ಸಹಿತ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಫೆ.26 ಸಂಜೆ 5 ಗಂಟೆಗೆ ನಡೆಯುವ ಶಿವರಾತ್ರಿ ಕಾರ್ಯಕ್ರಮದಲ್ಲಿ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾಂದ ಸ್ವಾಮೀಜಿ ಅಶೀರ್ವಚನ ನೀಡಲಿದ್ದು,ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.ಫೆ.28 ರಂದು ಸಮಾರೋಪ ಸಮಾರಂಭದಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದು,ಶಾಸಕ ರಾಜೇಶ್ ನಾಯ್ಕ್ ,ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಸಹಿತ ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಬಳಿಕ ರಾತ್ರಿ 7 ರಿಂದ 9 ರವರೆಗೆ ಶಿವಲೀಲೆಯನ್ನು ಸಾರುವ ಭಕ್ತಿ ಪ್ರಧಾನವಾದ ಪೌರಾಣಿಕ ಕಥಾನಕ’ ಶ್ರೀ ಶಿವ ಮಹಾತ್ಮ’ಯಕ್ಷಗಾನ ನಡೆಯಲಿದೆ ಎಂದರು.
ಇದೇ ಮೊದಲಿಗೆ ನಮ್ಮ ಸಂಸ್ಥೆಯ ವತಿಯಿಂದ ದ್ವಾದಶ ಜ್ಯೋತಿರ್ಲಿಂಗದ ಪ್ರದರ್ಶನವನ್ನು ಆಯೋಜಿಸಲಾಗಿದ್ದು,
ಪ್ರತಿದಿನ ಬೆಳಿಗ್ಗೆ 9 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರಿಗೆ ಜ್ಯೋತಿರ್ಲಿಂಗದ ಪ್ರದರ್ಶನವನ್ನು ವೀಕ್ಷಿಸಲ ಅನುಕೂಲ ಮಾಡಿಕೊಡಲಾಗಿದೆ,ಈ ಸಂದರ್ಭದಲ್ಲಿ ಭಕ್ತರಿಗೆ ಪೂಜೆಗೂ ಅವಕಾಶವಿರುವುದು ಎಂದರು.
ಈಶ್ವರೀಯ 1937 ರಲ್ಲಿ ಸ್ಥಾಪನೆಯಾದ ಪ್ರಜಾಪಿತ ಬ್ರಹ್ಮಕುಮಾರೀ ಈಶ್ವರೀಯ ವಿಶ್ವವಿದ್ಯಾಲಯವು ಪ್ರಸ್ತುತ ರಾಷ್ಟ್ರಮಟ್ಟದಲ್ಲಿ 150 ಕ್ಕು ಹೆಚ್ಚಾಗಿ ಸೇವಾಕೇಂದ್ರವನ್ನು ಹೊಂದಿದೆ.ಈ ಶಿಕ್ಷಣ ಸಂಸ್ಥೆಯಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಠಿಕೋನದ ಶಿಕ್ಷಣ ನೀಡಲಾಗುತ್ತಿದೆ ಎಂದು ಈ ಸಂದರ್ಭ ಹಾಜರಿದ್ದ ಬಿ.ಸಿ.ರೋಡಿನ ಈಶ್ವರೀಯ ವಿದ್ಯಾಲಯದ ಸಂಯೋಜಕ ರಾಜಯೋಗಿ ಬ್ರಹ್ಮ ಕುಮಾರ ಗಣಪತಿ ಅವರು ತಿಳಿಸಿದರು. ಸ್ವ ಪರಿವರ್ತನೆಯಿಂದ ಜಗತ್ತಿನ ಪರಿವರ್ತನೆಯಾಗಬೇಕಿದೆ. ಈಶ್ವರೀಯ ವಿದ್ಯಾಲಯದ ವತಿಯಿಂದ ವಿಶ್ವ ಪರಿವರ್ತನೆ ಕಾರ್ಯದ ಜೊತೆಗೆ ಜನರಲ್ಲಿ ಪರಮಾತ್ಮನ ಅರಿವು ಮೂಡಿಸುವ ಕಾರ್ಯವು ನಡೆಯುತ್ತಿದೆ.ಇಲ್ಲಿ ಯಾವುದೇ ಧರ್ಮದ ಅಂತರವಿರುವುದಿಲ್ಲ
ಎಂದು ವಿವರಿಸಿದರು.