Published On: Thu, Feb 20th, 2025

ಜಕ್ರಿಬೆಟ್ಟು ಕಿಂಡಿ ಅಣೆಕಟ್ಟು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಶಾಸಕರ ಭೇಟಿ 21 ಗೇಟ್ ಗಳ ಪೈಕಿ 7 ಗೇಟ್ ಗಳ ತೆರವು‌

ಬಂಟ್ವಾಳ: ಇಲ್ಲಿನ ಜಕ್ರಿಬೆಟ್ಟುವಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟುವಿನಲ್ಲಿ ನೀರು ಸಂಗ್ರಹಣೆಗಾಗಿ ಗೇಟ್ ಅಳವಡಿಸಿದ ಪರಿಣಾಮ ಮಣಿಹಳ್ಳ,ಪಣೆಕಲಪಡ್ಪು ಭಾಗದಲ್ಲಿ ಕೃಷಿಕರ ತೋಟಗಳಿಗೆ ನೀರು ನುಗ್ಗಿರುವ ಹಿನ್ನಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೋಮವಾರ  ಆಧಿಕಾರಿಗಳೊಂದಿಗೆ ಸ್ಥಳಕ್ಕಾಗಮಿಸಿ ಕಿಂಡಿಅಣೆಕಟ್ಟುವಿನಲ್ಲಿ‌ ಅಳವಡಿಸಲದಾ ಗೇಟ್ ತೆರವುಗೊಳಿಸಿ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ.

ಅಣೆಕಟ್ಟಿನ 21 ಗೇಟ್ ಗಳನ್ನು ಮುಚ್ಚಿ ಸುಮಾರು 5 ಮೀ ನಷ್ಟು ನೀರು ಸಂಗ್ರಹವಾಗಿದ್ದು,ನೇತ್ರಾವತಿ ನದಿಯಲ್ಲಿ ನೀರು ತುಂಬಿತಲ್ಲದೆ ಈ ಪರಿಸರ ಹಚ್ಚಹಸಿರಾಗಿ ಕಾಣತೊಡಗಿದಂತೆ ಇನ್ನೊಂದೆಡೆ ನದಿ ತೀರದ ತಗ್ಗು ಪ್ರದೇಶವಾದ ಮಣಿಹಳ್ಳ, ಪಣೆಕಲ ಸೇರಿದಂತೆ ಕೆಲ ಕಡೆಗಳಲ್ಲಿ ಅಡಿಕೆ ತೋಟಗಳಿಗೆ ನೀರು ನುಗ್ಗಿ‌ದ್ದು,ಸುಮಾರು ಒಂದುವರೆ ಅಡಿಯಷ್ಟು ನೀರು ನಿಲುಗಡೆಯಾಗಿತ್ತು.ಅಡಿಕೆ ತೋಟದಲ್ಲಿ ನಿರಂತರವಾಗಿ ಮೂರು ತ ನೀರು ನಿಂತರೆ ಮರಗಳು ನಾಶವಾಗುವ ಆತಂಕವನ್ನು ಕೃಷಿಕರು ವ್ಯಕ್ತಪಡಿಸಿದ್ದರು.

ಜಕ್ರಿಬೆಟ್ಟುವಿನ ಕಿಂಡಿ ಅಣೆಕಟ್ಟಿನಲ್ಲಿ ಪ್ರಾಯೋಗಿಕವಾಗಿ ನೀರು ಸಂಗ್ರಹಿಸುವ ಸಂದರ್ಭದಲ್ಲಿ ಕೃಷಿಕರ ತೋಟಗಳಿಗೆ ನೀರು ನುಗ್ಗಿರುವ ಹಿನ್ನಲೆಯಲ್ಲಿ  ಮುಂದಿನ ಕ್ರಮ ಕೈಕೊಳ್ಳುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಸೋಮವಾರ  ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ನಡೆದ ಕೆ.ಡಿ.ಪಿ.ಸಭೆಯಲ್ಲು ಪ್ರಸ್ತಾಪಿಸಿ ಗಮನಸೆಳೆದರು.


ಸಭೆ ಮುಗಿದ ಬಳಿಕ ಶಾಸಕರು ಇಲಾಖಾ ಅಧಿಕಾರಿಗಳೊಂದಿಗೆ ನೇರವಾಗಿ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟಿನ ಸ್ಥಳಕ್ಕೆ ಭೇಟಿ ನೀಡಿದ್ದಾರೆ.  ಈ ಸಂದರ್ಭದಲ್ಲಿ ಸಂತ್ರಸ್ತ ರೈತರು ಕೂಡ ಸ್ಥಳದಲ್ಲಿದ್ದು, ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರು.
ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕ‌ ರಾಜೇಶ್ ನಾಯ್ಕ್ ಅವರು ಕೃಷಿಕರ ತೋಟಗಳಿಗೆ ತೊಂದರೆಯಾಗದಂತೆ ನೀರಿನ ಮಟ್ಟವನ್ನು ಕಡಿಮೆಗೊಳಿಸಲು ಕನಿಷ್ಠ ಗೇಟ್ ಗಳನ್ನು ತೆರವು ಮಾಡಲು ಸೂಚನೆ ನೀಡಿದರು.
ನೀರು ಸಂಗ್ರಹಣೆಗಾಗಿ ಒಟ್ಟು ಅಳವಡಿಸಲಾದ 21 ಗೇಟ್ ಗಳ ಪೈಕಿ 7 ಗೇಟ್ ಗಳನ್ನು ಶಾಸಕರ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.ಈ 7 ಗೇಟ್ ಗಳಲ್ಲಿ ನೀರು ತುಂಬೆ ಡ್ಯಾಂನತ್ತ ಹರಿಯುತ್ತಿದ್ದು,  ನೀರಿನ ಮಟ್ಟ 5 ಮೀ . ನಿಂದ 4 ಮೀ ಗೆ ಇಳಿದಿದೆ.
‌ ನೀರು ಶೇಖರಣೆಯ ಮಟ್ಟದಲ್ಲಿ ಕಡಿಮೆಯಾದ ತಕ್ಷಣ  ಕೃಷಿಕರ ಅಡಿಕೆ ತೋಟಗಳಲ್ಲಿ ನಿಂತಿದ್ದ ನೀರು ಇಳಿದು ನದಿಯನ್ನು ‌ಸೇರಿದೆ ಎಂದು ಕೃಷಿಕರು ಹೇಳಿದ್ದಾರೆ. ಶಾಸಕರ ಸಮಯೋಚಿತ ಕ್ರಮದಿಂದ ಕೃಷಿಕರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಕೃಷಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಮ್ಮಜೊತೆಗಿರುವುದಾಗಿಯು ಶಾಸಕರು ಭರವಸೆಯನ್ನು ನೀಡಿದ್ದಾರೆ.
ಶಾಸಕರ ಭೇಟಿಯ ವೇಳೆ ಪುರಸಭಾ ಸದಸ್ಯರಾದ ಎ. ಗೋವಿಂದ ಪ್ರಭು,ಬಿಜೆಪಿ ಪ್ರಮುಖರಾದ ಜಗದೀಶ್ ಚೆಂಡ್ತಿಮಾರ್, ಸುದರ್ಶನ ಬಜ, ಕಾರ್ತಿಕ್ ಬಲ್ಲಾಳ್, ಎಕ್ಸಿಕ್ಯುಟಿವ್ ಇಂಜಿನಿಯರ್ ಸಯ್ಯದ್ ಅತಿಕೋಡ್, ಎ.ಇ.ಇ. ಸಾಜುದ್ದೀನ್, ಎ.ಇ.-2 ರಾಕೇಶ್, ಎ.ಇ.ಇ.ಶಿವಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter