ಗುರುಪುರದಲ್ಲಿ ಲಾರಿ ಡಿಕ್ಕಿಯಾಗಿ
ಬಸ್ ತಂಗುದಾಣ ಸಂಪೂರ್ಣ ಜಖಂ
ಗುರುಪುರ : ಗುರುಪುರ ಜಂಕ್ಷನ್‌ನಲ್ಲಿ ಶುಕ್ರವಾರ ಅಪರಾಹ್ನ ಮಂಗಳೂರು ಕಡೆಗೆ ಮಣ್ಣು ಸಾಗಿಸುತ್ತಿದ್ದ ಲಾರಿಯೊಂದು ಬಸ್ ತಂಗುದಾಣ ಮತ್ತು ಪಕ್ಕದ ಶ್ರೀ ಶನೀಶ್ವರ ಪೂಜಾ ಸಮಿತಿಯ ಕಚೇರಿಗೆ ಡಿಕ್ಕಿ ಹೊಡೆದಿದ್ದು, ಬಸ್ ತಂಗುದಾಣ ಮತ್ತು ಕಚೇರಿ ಸಂಪೂರ್ಣ ಜಖಂಗೊAಡಿದೆ. ಅಪಘಾತದ ವೇಳೆ ಕೈಕಾಲಿಗೆ ಗುದ್ದಿದ ಗಾಯಗಳಾಗಿರುವ ಇಬ್ಬರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಗಿದೆ.

ಕೇರಳದತ್ತ ಮಣ್ಣು ಸಾಗಿಸಲಾಗುತ್ತಿತ್ತು ಎನ್ನಲಾದ ೧೨ ಚಕ್ರಗಳ ಘನ ವಾಹನ ಅಪಘಾತಕ್ಕೀಡಾಗಿದೆ. ಬಸ್ ತಂಗುದಾಣ ಸಂಪೂರ್ಣ ನುಜ್ಜುಗುಜ್ಜಾಗಿದ್ದರೆ, ಅದರ ಮೇಲ್ಛಾವಣಿಯು ಹತ್ತಿರದ ಕಟ್ಟಡದ ಮೇಲೆ ಬಿದ್ದು ಪುಡಿಗೈಯಲ್ಪಟ್ಟಿದೆ. ಅದೃಷ್ಟವಶಾತ್ ದುರ್ಘಟನೆ ಸಂಭವಿಸಿದ ವೇಳೆ ಬಸ್ ತಂಗುದಾಣದಲ್ಲಿ ಹೆಚ್ಚು ಜನರಿರಲಿಲ್ಲ.
ಅಪಘಾತದ ಬಳಿಕ ಸ್ಥಳದಲ್ಲಿ ನಿಲ್ಲಿಸದ ಲಾರಿಯನ್ನು ಸ್ಥಳೀಯರು ಬೆನ್ನಟ್ಟಿ ಅಲೈಗುಡ್ಡೆಯಲ್ಲಿ ತಡೆದು ನಿಲ್ಲಿಸಿದ್ದಲ್ಲದೆ, ಚಾಲಕನಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.