ಪೊಳಲಿ: ಸೇತುವೆ ದುರಸ್ತಿ ಕಾಮಗಾರಿ ವೀಕ್ಷಿಸಿದ ಸಚಿವರು, ಅಧಿಕಾರಿಗಳಿಗೆ ಖಡಕ್ ಸೂಚನೆ

ಗುರುಪುರ : ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹಳೆ ಮತ್ತು ಹೊಸ ಸೇತುವೆಗಳ ಎರಡೂ ಪಾರ್ಶ್ವದಲ್ಲಿ ಸುಮಾರು 500 ಮೀಟರ್ ಅಂತರದಲ್ಲಿ ಮರಳುಗಾರಿಕೆ ನಡೆಸದಂತೆ ಪಿಡಬ್ಲ್ಯೂಡಿ ಇಲಾಖೆ ಕಣ್ಗಾವಲು ಹಾಕಬೇಕು. ಸೇತುವೆಗಳ ನಿರ್ವಹಣೆ ವಿಷಯದಲ್ಲಿ ಇಲಾಖೆ ನಿರ್ಲಕ್ಷ್ಯ ತೋರಬಾರದು ಎಂದು ಪೊಳಲಿ-ಅಡ್ಡೂರು ಸೇತುವೆಯ ಧಾರಣಾ ಸಾಮರ್ಥ್ಯ ವೃದ್ಧಿ ಕಾಮಗಾರಿ ವೀಕ್ಷಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇಲಾಖಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಫೆ. 5ರಂದು ಪೊಳಲಿಗೆ ಭೇಟಿ ನೀಡಿ, ಸೇತುವೆ ದುರಸ್ತಿ ಕಾಮಗಾರಿ ವೀಕ್ಷಿಸಿದ ಸಚಿವರು, ಸೇತುವೆಗಳ ಹತ್ತಿರ ಜಾತ್ಯತೀತವಾಗಿ ಮರಳುಗಾರಿಕೆ ನಡೆಯುತ್ತಿರುವ ಗಮನಕ್ಕೆ ಬಂದಿದೆ. ನಮ್ಮ ಮನೆಯ ಸೊತ್ತುಗಳಂತೆ ಸೇತುವೆಗಳ ರಕ್ಷಿಸುವುದು ನಮ್ಮ ಕರ್ತವ್ಯವಾಗಬೇಕು. ಸೇತುವೆಗಳ ನಿರ್ವಹಣೆ ದೆಸೆಯಲ್ಲಿ ಕಡ್ಡಾಯವಾಗಿ ಸೀಸಿ ಕ್ಯಾಮರಾ ಅಳವಡಿಸಬೇಕು. ಪೊಳಲಿ ಸೇತುವೆಯ ದುರಸ್ತಿ ಕಾರ್ಯ ತುರ್ತಾಗಿ ಪೂರ್ಣಗೊಳಿಸಬೇಕು ಎಂದರು.

ಪ್ರಮುಖ ರಸ್ತೆ ಸಂಪರ್ಕದ ಇಲ್ಲಿ ಹಳೆ ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಿಸುವ ಪ್ರಸ್ತಾವ ಹಾಗೂ ಜಿಲ್ಲೆಯ ಇತರ ಸೇತುವೆಗಳ ಕಾಮಗಾರಿ ತ್ವರಿತಗತಿಯಲ್ಲಿ ನಡೆಸುವ ಅಗತ್ಯತೆಯ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ರಾಜ್ಯ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಮೇ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣ :
ಪೊಳಲಿ-ಅಡ್ಡೂರು ಸೇತುವೆಯ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಆರಂಭಗೊಂಡಿದೆ. ಇದು 9 ಕೋಟಿ ರೂ ವೆಚ್ಚದ ಕಾಮಗಾರಿಯಾಗಿದ್ದು, ಮೇ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಳಿದೆ. ಅಲ್ಲಿಯವರೆಗೆ ಘನ ವಾಹನಗಳ ಸಂಚಾರಕ್ಕೆ ನಿಷೇಧ ಮುಂದುವರಿಯಲಿದ್ದು, ಧಾರಣಾ ಸಾಮರ್ಥ್ಯ ವೃದ್ಧಿ ಕಾಮಗಾರಿ ಮುಗಿದ ಬಳಿಕ ಸೇತುವೆ ಮೇಲೆ ಎಲ್ಲ ವಾಹನಗಳ ಸಂಚಾರ ಪುನರಾರಂಭಗೊಳ್ಳಲಿದೆ. ಸೇತುವೆಯ ಕೆಲವು ಬೇಯರಿಂಗ್ ಬದಲಿಸುವಿಕೆ ಹಾಗೂ ಗರ್ಡರ್‌ಗಳ ದುರಸ್ತಿ ಕಾರ್ಯ ಆಗಬೇಕಿದೆ ಎಂದು ಪಿಡಬ್ಲ್ಯೂಡಿ ಕಾರ್ಯನಿರ್ವಹಣಾ ಇಂಜಿನಿಯರ್ ಅಮರನಾಥ್ ತಿಳಿಸಿದರು.

ಫಲ್ಗುಣಿ ನದಿಗೆ ಅಡ್ಡಲಾಗಿ ಪೊಳಲಿ-ಅಡ್ಡೂರಿನಲ್ಲಿ ಸುಮಾರು 50 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಬೇಕಿರುವ ಹೊಸ ಸೇತುವೆಯ ಪ್ರಸ್ತಾವ ಸರ್ಕಾರಕ್ಕೆ ಕಳುಹಿಸಲಾಗಿದೆ. ಇಲ್ಲಿ ಸೇತುವೆಯ ಎರಡೂ ಪಾರ್ಶ್ವದಲ್ಲಿ ಮರಳುಗಾರಿಕೆ ನಡೆದಿರುವುದರಿಂದ ನದಿ ನೀರು ಆಳಕ್ಕಿಳಿದಿದೆ. ಪಿಲ್ಲರ್‌ಗಳ ಬಳಿ ಯಥೇಚ್ಛ ಮರಳು ಜಮಾವಣೆಯಾದರೆ, ಸೇತುವೆಗೆ ಬಲ ಬರುತ್ತದೆ. ಪಿಡಬ್ಲ್ಯೂಡಿ ವ್ಯಾಪ್ತಿಯಲ್ಲಿರುವ ಎಲ್ಲ ಸೇತುವೆಗಳ ನಿರ್ವಹಣೆಯತ್ತ ಸ್ಪಷ್ಟ ನಿಗಾ ವಹಿಸಲಾಗುತ್ತಿದೆ ಎಂದು ಸಚಿವರ ಅಸಮಾಧಾನಕ್ಕೆ ಪಿಡಬ್ಲ್ಯೂಡಿ ಅಧಿಕಾರಿ ಉತ್ತರಿಸಿದರು.
ಪೊಳಲಿ ದೇವಳಕ್ಕೆ ಭೇಟಿ:
ಸೇತುವೆ ಕಾಮಗಾರಿ ಪರಿಶೀಲನೆ ಬಳಿಕ ನೇರವಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ದೇವರ ದರ್ಶನ ಪಡೆದರು. ದೇವಸ್ಥಾನದ ಅರ್ಚಕರಾದ ಮಾಧವ ಭಟ್, ಪರಮೇಶ್ವರ ಭಟ್ ಅವರು ಸಚಿವರಿಗೆ ದೇವರ ಪ್ರಸಾದ ನೀಡಿ, ಶಾಲು ಹೊದೆಸಿ ಗೌರವಿಸಿದರು. ಅರ್ಚಕರಾದ ನಾರಾಯಣ ಭಟ್, ರಾಮ ಭಟ್, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ವಾಸ್ತುಶಿಲ್ಪದ ಬಗ್ಗೆ ಸಚಿವರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವರೊಂದಿಗೆ ಎಂಎಲ್‌ಸಿಗಳಾದ ಡಾ. ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಚಂದ್ರಹಾಸ ಪಲ್ಲಿಪಾಡಿ, ಪಂಚಾಯತ್ ಸದಸ್ಯರು, ಕಾಂಗ್ರೆಸ್ ಪ್ರಮುಖರಾದ ಚಂದ್ರಶೇಖರ ಭಂಡಾರಿ, ಸುರೇಂದ್ರ ಕಂಬಳಿ, ಕಾಂಗ್ರೆಸ್ ಕಾರ್ಯಕರ್ತರು, ಜಿಲ್ಲಾಧಿಕಾರಿ ಮುಲ್ಲೆÊ ಮುಹಿಲನ್, ಸಹಾಯಕ ಆಯುಕ್ತ(ಎಸಿ) ಹರ್ಷವರ್ಧನ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಪಡುಪೆರಾರ ವಿಎ ದೇವರಾಜ್, ವೆಂಕಟೇಶ ನಾವಡ, ಮೊಗ್ರೋಡಿ ಕನ್‌ಸ್ಟ್ರಕ್ಷನ್ ಕಂಪೆನಿಯ ಮಾಲಕ ಸುಧಾಕರ ಶೆಟ್ಟಿ, ಪ್ರಧಾನ ಇಂಜಿನಿಯರ್ ಸುಬ್ರಹ್ಮಣ್ಯ ಮತ್ತಿತರರು ಇದ್ದರು.