ಬಂಟ್ವಾಳ: ರೇಷನ್ ಕಾಡ್೯ ಪಡೆಯಲು ಮುಗಿಬಿದ್ದ ಜನ, ಸ್ಥಳಕ್ಕೆ ಧಾವಿಸಿದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾಲೂಕಿನ ಆಡಳಿತ ಸೌಧದದಲ್ಲಿ ರೇಷನ್ ಕಾಡ್೯ ಪಡೆಯಲು ಜನರು ಮುಗಿಬಿದ್ದಿದ್ದು,ಈ ಸುದ್ದಿ ತಿಳಿಯುತಿದಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸ್ಥಳಕ್ಕೆ ಧಾವಿಸಿದ್ದಾರೆ. ಕಂದಾಯ ಇಲಾಖೆಯ ಆಹಾರ ಶಾಖೆಗೆ ಹಠಾತ್ ಭೇಟಿ ನೀಡಿ ಜನಸಾಮಾನ್ಯರಿಗೆ ಸ್ಪಷ್ಟವಾದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಳೆದೆರಡು ದಿನಗಳಿಂದ ತಾಲೂಕು ಕಚೇರಿಯ ಆಹಾರ ಶಾಖೆಯ ಮುಂಭಾಗ ರೇಷನ್ ಕಾರ್ಡ್ ಪಡೆಯುವುದಕ್ಕಾಗಿ ಜನಸಂದಣಿಯೇ ನೆರದಿದ್ದು, ಮಂಗಳವಾರವು ಆಡಳಿತ ಸೌಧದಲ್ಲಿ ಜನ ಮುಗಿಬಿದ್ದಿದ್ದರು.ಈ ಸಂದರ್ಭದಲ್ಲಿ ಸರತಿಯಲ್ಲಿ ನಿಂತು ಸುಸ್ತಾದ ಫಲಾನುಭವಿಗಳು ಶಾಸಕರಿಗೆ ಪೋನ್ ಕರೆ ಮಾಡಿ ದೂರು ನೀಡಿದ್ದರು.

ಇದಕ್ಕೆ ಸ್ಪಂದಿಸಿದ ಶಾಸಕರು ತಾಲೂಕು ಕಚೇರಿಗೆ ಹಠಾತ್ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರಿಂದ ಮಾಹಿತಿ ಪಡೆದು ಜನರಿಗೆ ಯಾವುದೇ ತೊಂದರೆಯಾಗದಂತೆ ರೇಷನ್ ಕಾರ್ಡ್ ವಿತರಿಸುವಂತೆ ಸೂಚನೆ ನೀಡಿದರು. ರೇಷನ್ ಕಾರ್ಡ್ ಪಡೆಯಲು ಡಿ.31 ಕೊನೆಯ ದಿನವಾಗಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿ ಹಬ್ಬಿಸಲಾಗಿದ್ದು,ಇದರಿಂದಾಗಿ ಜನರು ಆತಂಕಪಟ್ಟು ಎರಡುದಿನಗಳಿಂದ ಆಡಳಿತ ಸೌಧದ ಮುಂದೆ ಕ್ಯೂ ನಿಲ್ಲುವಂತಾಗಿದೆ.
ರೇಷನ್ ಕಾರ್ಡ್ ಪಡೆಯಲು ಇನ್ನು ಕಾಲಾವಕಾಶವಿದ್ದು,ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ, ಈ ಬಗ್ಗೆ ತಹಶೀಲ್ದಾರ್ ಅವರು ಅಧಿಕೃತವಾಗಿ ಮಾಧ್ಯಮದ ಮೂಲಕ ಹೇಳಿಕೆ ನೀಡಲಿ ಎಂದು ಶಾಸಕ ರಾಜೇಶ್ ನಾಯ್ಕ್ ಸಲಹೆ ನೀಡಿದರು. ಈ ಸಂದರ್ಭ ಪಕ್ಷದ ಪ್ರಮುಖರಾದ ವಿಕಾಸ್ ಪುತ್ತೂರು, ಶಾಂತವೀರ ಪೂಜಾರಿ , ಶಶಿಕಾಂತ್ ಶೆಟ್ಟಿ ಆರುಮುಡಿ ಸರಪಾಡಿ, ಅನೂಪ್ ಮಯ್ಯ, ಮೋಹನ್ ಪಿ.ಎಸ್.ಶಿವರಾಜ್ ಕಾಂದಿಲ, ಪ್ರಣಾಮ್ ಅಜ್ಜಿಬೆಟ್ಟು, ಆನಂದ ಎ. ಶಂಭೂರು ಮತ್ತಿತರರಿದ್ದರು.