‘ಮಂಗಳೂರು ಕಂಬಳ’ಕ್ಕೆ ಅದ್ಧೂರಿ ಚಾಲನೆ, ನಾಳೆ ಫೈನಲ್, ಕಂಬಳದ ಜತೆಗೆ ಕ್ರೀಡಾ ಸ್ಪರ್ಧೆ
‘ಮಂಗಳೂರು ಕಂಬಳ’ಕ್ಕೆ ಇಂದು (ಡಿ.28) ಚಾಲನೆ ನೀಡಲಾಗಿದೆ. ಕಂಬಳ ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡು ಕೆರೆಯಲ್ಲಿ ನಡೆಯುತ್ತಿದ್ದು, ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ತಂದೆ, ಎಂಆರ್‌ಪಿಎಲ್‌ನ ನಿವೃತ್ತ ಆಡಳಿತ ನಿರ್ದೇಶಕರಾದ ಎಂ.ವೆಂಕಟೇಶ್ ಕಂಬಳ ಉದ್ಘಾಟಿಸಿದ್ದಾರೆ. ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಸಭಾಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ವಹಿಸಿದ್ದಾರೆ. ಇನ್ನು ಕಂಬಳ ಸಂಪೂರ್ಣ ನೇತೃತ್ವವನ್ನು ಕಂಬಳ ಸಮಿತಿ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ವಹಿಸಿಕೊಂಡಿದ್ದಾರೆ.
ಇನ್ನು ಕಂಬಳಕ್ಕೆ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಕೆ. ಚಿತ್ತರಂಜನ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಶ್ರೀ ಜಿತಕಾಮಾನಂದ ಜೀ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ , ಶ್ರೀ ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಸೇರಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಿದ್ದಾರೆ.
ಇಂದು ಸಂಜೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಆರ್.ಜಿ ಗ್ರೂಪ್ ನ ಸಿ.ಎಂ.ಡಿ , ಮಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಡಾ.ಕೆ ಪ್ರಕಾಶ್ ಶೆಟ್ಟಿ ವಹಿಸಲಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರು, ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಹಾಲಿ-ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರೆ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಉದ್ಯಮಿಗಳು, ಗಣ್ಯರು ವಹಿಸಲಿದ್ದಾರೆ.
ಒಂದು ಕಡೆ ಕಂಬಳದ ಸಂಭ್ರಮ ಇನ್ನೊಂದು ಕಡೆ ಕ್ರೀಡಾ ಸ್ಪರ್ಧೆಗಳು ಕೂಡ ನಡೆಯಲಿದೆ. ಇದು ಒಂದು ಐತಿಹಾಸಿ ಕ್ಷಣವಾಗಿ ಕಂಡಿದೆ. ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಕನೆ ಹಲಗೆ, ಅಡ್ಡ ಹಲಗೆ ಹೀಗೆ ಒಟ್ಟು ಆರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಇದರ ಜತೆಗೆ ಕಂಬಳದ ಅಂಗವಾಗಿ ಕಲರ್‌ಕೂಟ ಡ್ರಾಯಿಂಗ್ ಸ್ಪರ್ಧೆ ನಡೆಯಲಿದೆ. 10 ವರ್ಷದವರೆಗಿನ ಮಕ್ಕಳು ‘ರಂಗ್‌ದ ಎಲ್ಯ’, 10ರಿಂದ 15 ವರ್ಷದೊಳಗಿನ ಮಕ್ಕಳು ‘ರಂಗ್‌ದ ಮಲ್ಲ’ ವಿಭಾಗದಲ್ಲಿ ಭಾಗವಹಿಸಬಹುದು.ಇನ್ನು ರಂಗ್ ಕೂಟ ವಿಭಾಗದಲ್ಲಿ ವಯೋಮಿತಿಯ ನಿರ್ಬಂಧ ಇಲ್ಲ. ಫೋಟೊಗ್ರಾಫಿ ಸ್ಪರ್ಧೆ ಹಾಗೂ ರೀಲ್ಸ್ ಸ್ಪರ್ಧೆಗಳು ಕೂಡ ನಡೆಯಲಿವೆ. ರೀಲ್ಸ್ ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವಾಗ #mangalurukambala8 ಹ್ಯಾಷ್ ಟ್ಯಾಗ್ ಬಳಸಬೇಕು.
ನಾಳೆ ಕಂಬಳ ಫೈನಲ್:
ಎರಡು ದಿನಗಳ ಮಂಗಳೂರು ಕಂಬಳದಲ್ಲಿ ಫೈನಲ್ ಸ್ಪರ್ಧೆ ಡಿ.29ರಂದು ಬೆಳಗ್ಗೆ ನಡೆಯಲಿದೆ. ಕಂಬಳದ ಹತ್ತಿರದಿಂದ ಬಲ್ಲವರಿಗೆ ಹೊರತಾಗಿ ಜನಸಾಮಾನ್ಯರಿಗೆ ಭಾನುವಾರ ಕೂಡ ಕಂಬಳ ಓಟ ನಡೆಯುತ್ತದೆ.