ಪೊಳಲಿ ಸೇತುವೆ ದುರಸ್ಥಿ ಕಾಮಗಾರಿಗೆ 610 ಲಕ್ಷ ರೂ.ಗೆ ಅನುಮೋದನೆ: ಸಚಿವ ಜಾರಕಿಹೊಳಿ
ಬಂಟ್ವಾಳ: ಪಲ್ಗುಣಿ ನದಿಗೆ ಪೊಳಲಿ( ಅಡ್ಡೂರು) ಸೇತುವೆ ಶಿಥಿಲವಾಗಿರುವ ಕಾರಣ 2023-24 ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಏಕರೂಪ ದರಪಟ್ಟಿಯನ್ವದ ಪ್ರಕಾರ ಸೇತುವೆ ದುರಸ್ಥಿ ಕಾಮಗಾರಿಗೆ 610 ಲಕ್ಷ ರೂ. ಅನುಮೋದನೆ ನೀಡಲಾಗಿದೆ. ಹೊಸ ಸೇತುವೆ ನಿರ್ಮಾಣಕ್ಕೆ 5000 ಲಕ್ಷ ರೂ. ರೇಖಾ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದ್ದು, ಅನುದಾನ ಲಭ್ಯತೆಗೆ ಅನುಗುಣವಾಗಿ ಟೆಂಡರ್ ಕರೆದು ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿ ಚಳಿಗಾಲ ವಿಧಾನಮಂಡಲ ಅಧಿವೇಶನದಲ್ಲಿ ಬಂಟ್ವಾಳ ಶಾಸಕ ರಾಜೇಶದ ನಾಯ್ಕ್ ಉಳಿಪಾಡಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ 1970 ರಲ್ಲಿ ನಿರ್ಮಾಣವಾಗಿರುವ ಈ ಸೇತುವೆಗೆ ಅತಿಯಾದ ಮರಳುಗಾರಿಕೆಯಿಂದ ಹಾನಿಯಾಗಿದ್ದು,ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.
ಯೋಜನೆ ಮತ್ತು ರಸ್ತೆ,ಆಸ್ತಿಗಳ ನಿರ್ವಹಣಾ ಕೇಂದ್ರ ಬೆಂಗಳೂರು ಹಾಗೂ ಕಾಂಕ್ರೆಟ್ ಸ್ಟ್ರಕ್ಚರಲ್ ಪೊರೆನ್ಸಿಕ್ ಕನ್ಸಲ್ಟಂಟ್ ಬೆಂಗಳೂರು ಅಡ್ಡೂರು ಸೇತುವೆಯ ಜಂಟಿ ಪರಿವೀಕ್ಷಣೆ ನಡೆಸಿ ಸೇತುವೆಯ ಸಾಂದ್ರತೆಯ ವರದಿಯನ್ನುಕೂಡ ನೀಡಿದ್ದಾರೆ.ಈ ವರದಿ ಅನುಗುಣವಾಗಿ ಸೇತುವೆಯ ದುರಸ್ಥಿಕಾರ್ಯಕ್ಕಾಗಿ 610 ಲ.ರೂ.ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಜಾರಕಿಹೊಳಿ ಅವರು ಶಾಸಕ ರಾಜೇಶ್ ನಾಯ್ಕ್ ಅವರ ಉಪಪ್ರಶ್ನೆಗೆ ಉತ್ತರಿಸಿದ್ದಾರೆ.
ಬಜಪೆ ವಿಮಾನನಿಲ್ದಾಣ,ಪೊಳಲಿ ರಾಜರಾಜೇಶ್ವರೀ ದೇವಳ,ಬಿ.ಸಿ.ರೋಡು ಮೂಲಕ ಬೆಂಗಳೂರು- ಮಂಗಳೂರು ಗೆ ಪ್ರಮುಖ ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿರುವುದರಿಂದ ಸಾರ್ವಜನಿಕರು, ಶಾಲಾಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಸಚಿವರ ಗಮನಸೆಳೆದಿದ್ದು, ಶಿಥಿಲಾವಸ್ಥೆಯಲ್ಲಿರುವ ಈ ಸೇತುವೆಯಲ್ಲಿ ಘನವಾಹನವನ್ನು ನಿಷೇಧಿಸಿರುವ ಹಿನ್ನಲೆಯಲ್ಲಿ ಸೇತುವೆಯ ಎರಡು ಬದಿ ತಾತ್ಕಾಲಿಕ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. 2.75 ಮೀ.ಎತ್ತರದಲ್ಲಿ ರಿಟ್ರೋ ರಿಫ್ಲೆಕ್ಟರ್ ಗ್ಯಾಂಟ್ರಿ ಬೋರ್ಡು ಅಳವಡಿಸಲಾಗಿದ್ದು, ಪರ್ಯಾಯ ರಸ್ತೆಯ ಮೂಲಕ ಸಂಚಾರಕ್ಕೆ ಅವಕಾಶ ನೀಡಲಾಗಿದೆ.ಇಲ್ಲಿ ಲಘವಾಹನಗಳಿಗೆ ಮಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಪೊಳಲಿ ಕ್ಷೇತ್ರಕ್ಕಾಗಮಿಸುವ ಭಕ್ತರು ಮತ್ತು ವಿದ್ಯಾರ್ಥಿಗಳು, ಕಾರ್ಮಿಕರ ಸಂಚಾರಕ್ಕಾಗಿ ಬಂಟ್ಚಾಳ ಶಾಸಕ ರಾಜೇಶ್ ನಾಯ್ಕ್ ಅವರು ಉಚಿತ ಮಿನಿ ಬಸ್ ನ ವ್ಯವಸ್ಥೆ ಕಲ್ಪಿಸಿದ್ದು, ಸದ್ಯ ಅದು ಮುಂದುವರಿದಿದೆ.ಪರ್ಯಾಯ ರಸ್ತೆ ನಿರ್ಮಾಣಕ್ಕಾಗಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದ್ದ ಹೋರಾಟ ಸಮಿತಿ ಪ್ರತಿಭಟನೆಗೂ ಮುಂದಾಗಿತ್ತು. ಶಾಸಕ ರಾಜೇಶ್ ನಾಯ್ಕ್, ಭರತ್ ಶೆಟ್ಟಿ ಅವರ ಭರವಸೆ ನೀಡಿದರು. ಈ ಕಾರಣಕ್ಕೆ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತ್ತು.