ಬಂಟ್ವಾಳ: ಯಕ್ಷಾವಾಸ್ಯಮ್ ಕಾರಿಂಜಿಯ ಚತುರ್ಥ ವಾರ್ಷಿಕೋತ್ಸವ ಕಾರ್ಯಕ್ರಮ
ಬಂಟ್ವಾಳ: ಕಾಡಬೆಟ್ಟು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಕಾವಳಪಡೂರು ಗ್ರಾ.ಪಂ.ನ ವಗ್ಗದ ಯಕ್ಷಾವಾಸ್ಯಮ್ ಕಾರಿಂಜ ಇದರ ಚತುರ್ಥ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಕಾರಿಂಜ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಪಚ್ಚಾಜೆಗುತ್ತು ಜಿನರಾಜ ಆರಿಗ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಉಪ ಪ್ರಾಂಶುಪಾಲ ಬಿ.ಉದಯ ಕುಮಾರ್ ಜೈನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು, ಯಕ್ಷಗಾನವು ಸರ್ವಾಂಗೀಣ ಶ್ರೇಷ್ಠ ಕಲೆಯಾಗಿದ್ದು, ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಭಾಷಾ ಶುದ್ಧಿಯ ಜತೆ ಜ್ಞಾನ ಭಂಡಾರ ಬೆಳೆಯುವುದು. ಯಕ್ಷಗಾನ ತರಬೇತಿ ನೀಡಿ ಮುಂದಿನ ಪೀಳಿಗೆಯ ಕಲಾವಿದರನ್ನು ರೂಪಿಸುವ ಯಕ್ಷವಾಸ್ಯಮ್ ಸಂಸ್ಥೆಯ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆ ನೀಡುವ ಯಕ್ಷವಾಸ್ಯಮ್ ಪ್ರಶಸ್ತಿಯನ್ನು ಹಿರಿಯ ಮದ್ದಳೆಗಾರರಾದ ಹರಿನಾರಾಯಣ ಬಪಾಡಿತ್ತಾಯ ಹಾಗೂ ಹಿರಿಯ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು. ಯಕ್ಷಗಾನ ಹಿಮ್ಮೇಳ ವಾದಕ ಚಂದ್ರಶೇಖರ ಭಟ್ ಕೊಂಕಣಾಜೆ ಅಭಿನಂದನ ನುಡಿಗಳನ್ನಾಡಿ, ಪ್ರಥಮ ಮಹಿಳಾ ಭಾಗವತರೆಂಬ ಹಿರಿಮೆಯ, ಸಾವಿರಾರು ಶಿಷ್ಯರನ್ನು ರೂಪಿಸಿದ ಹರಿ ಲೀಲಾ ದಂಪತಿಗೆ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು. ಇದೇ ವೇಳೆ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಸುಭೀಕ್ಷಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಮಡಂತ್ಯಾರು ಜೆಸಿಐ ನಿಕಟಪೂರ್ವ ಅಧ್ಯಕ್ಷ ಅಶೋಕ್ ಗುಂಡಿಯಲ್ಕೆ ,ಶ್ರುತಾಂಜನ್ ಜೈನ್ ಅಲಂಪುರಿ ಗುತ್ತು ,ಕಾಡಬೆಟ್ಟು ಶ್ರೀ ಶಾರದಾಂಬ ಭಜನಾ ಮಂದಿರ ಗೌರವಧ್ಯಕ್ಷ ಪ್ರಮೋದ್ ಕುಮಾರ್ ರೈ,ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ,ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಯರಾಮ ಭಟ್ ಅವರು ಸ್ವಾಗತಿಸಿದರು. ದೇವದಾಸ ಶೆಟ್ಟಿ ಬಂಟ್ವಾಳ ಅಭಿನಂದನಾ ಪತ್ರ ವಾಚಿಸಿದರು. ಸಂಚಾಲಕಿ ಸಾಯಿಸುಮಾ ಎಂ.ನಾವಡ ಕಾರಿಂಜ ವಂದಿಸಿದರು. ರತ್ನ ದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ, ಭಾಗವತಿಕೆ,ಯಕ್ಷಗಾನ, ಬಳಿಕ ಮಹಿಳಾ ಕಲಾವಿದರಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಪೂರ್ಣಿಮಾ ಯತೀಶ್ ರೈ ನಿರ್ದೇಶನದಯಕ್ಷಗಾನ ವೀರಮಣಿ ಕಾಳಗ ಪ್ರದರ್ಶನ ನಡೆಯಿತು.