ಗುರುಪುರ: ನಾಲ್ಕೈದು ಮಂದಿಯ ಮೇಲೆ ದಾಳಿ ಮಾಡಿದ ಹೆಜ್ಜೇನು, ಗಂಭೀರ ಗಾಯ
ಗುರುಪುರ : ಗುರುಪುರದ ಮಠದಬೈಲಿನಲ್ಲಿ ಹೆಜ್ಜೇನಿನ(ಪೆರಿಯ) ಗುಂಪೊಂದು ನಾಲ್ಕೈದು ಮಂದಿಯ ಮೇಲೆ ದಾಳಿ ಮಾಡಿ, ಕಚ್ಚಿ ಗಾಯಗೊಳಿಸಿದೆ. ಈ ಘಟನೆ ನ. 4ರಂದು ಬೆಳಿಗ್ಗೆ ನಡೆದಿದೆ. ಬೇಬಿ ಯಾನೆ ಸರೋಜ, ಗಣೇಶ್ ಕೊಟ್ಟಾರಿ, ಶೋಧನ್ ಇವರಿಗೆ ಹೆಜ್ಜೇನುಗಳು ಕಚ್ಚಿ ಗಂಭೀರ ಗಾಯಗೊಳಿಸಿದೆ. ಉಳಿದ ಇಬ್ಬರಿಗೆ ಸ್ವಲ್ಪ ಗಾಯವಾಗಿದೆ. ಗಂಭೀರ ಗಾಯಾಳುಗಳು ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಪಡೆದಿರುವ ಬೇಬಿಯವರು ಈಗಾಗಲೇ ಬಿಡುಗಡೆಯಾಗಿದ್ದಾರೆ. ಇನ್ನಿಬ್ಬರು ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಹೇಳಲಾಗಿದೆ.
ಬೇಬಿಯವರು ಮನೆಯಂಗಳದಲ್ಲಿದ್ದ ವೇಳೆ ಹೆಜ್ಜೇನು ಗುಂಪೊಂದು ದಾಳಿ ಮಾಡಿದೆ. ನೋವಿಂದ ಅವರು ಹತ್ತಿರದ ರಸ್ತೆಗೆ ಓಡಿ ಬಂದಾಗ, ನೆರವಿಗೆ ಬಂದ ಗಣೇಶ್ ಅವರ ಮೇಲೆ ಎರಗಿದೆ. ಹೆಜ್ಜೇನು ಗುಂಪಿನಿಂದ ತಪ್ಪಿಸಿಕೊಳ್ಳಲು ರಸ್ತೆಯಲ್ಲೇ ಓಡಿದ್ದಾರೆ, ಈ ವೇಳೆ ಅವರ ನೆರವಿಗೆ ಬಂದ ಶೋಧನ್ ಮೈಮೇಲೂ ದಾಳಿ ಮಾಡಿದೆ. ಗಣೇಶ್ ಅವರು ಮೈಮೇಲೆ ರೈನ್‌ಕೋಟ್ ಹಾಕಿ ತಪ್ಪಿಸಿಕೊಂಡರೆ, ಮನೆಯೊಂದರ ಬಳಿ ಓಡಿದ್ದ ಶೋಧನ್ ಮೈಮೇಲೆ ಪಂಪ್ ಮೂಲಕ ನೀರು ಎರಚಿಕೊಂಡು ಬಚಾವ್ ಆಗಿದ್ದಾರೆ. ಮೂವರಿಗೂ ಮುಖ, ತಲೆ, ಮೈ-ಕೈಕಾಲಿಗೆ ಹೆಜ್ಜೇನು ಕಚ್ಚಿ ಗಾಯಗೊಳಿಸಿದೆ. ಬಳಿಕ ಸ್ಥಳೀಯರು ಮೂವರ ಗಾಯಾಳುಗಳನ್ನು ಮಂಗಳೂರಿನ ಎರಡು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.