ಬಜ್ಪೆ ಹೋಲಿ ಫ್ಯಾಮಿಲಿ ಶಾಲೆಯ ವಜ್ರ ಮಹೋತ್ಸವ
ಗುಣ ಮಟ್ಟದ ಶಿಕ್ಷಣ : ಸಿಸ್ಟರ್ ಲಿಲ್ಲಿ ಪಿರೇರ
ಕೈಕಂಬ : ಬೆಥನಿ ವಿದ್ಯಾಸಂಸ್ಥೆ(ರಿ) ಮಂಗಳೂರು ಪ್ರಾಂತ್ಯಕ್ಕೊಳಪಟ್ಟಿರುವ ಬಜ್ಪೆಯ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮ ನ. ೩೦ರಂದು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಥನಿ ವಿದ್ಯಾಸಂಸ್ಥೆ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿ ಹಾಗೂ ಕಾರ್ಪೊರೆಟ್ ಮ್ಯಾನೇಜರ್ ಸಿಸ್ಟರ್ ಲಿಲ್ಲಿ ಪಿರೇರ ಅವರು ಮಾತನಾಡಿ, ಶಾಲೆಗಳಲ್ಲಿ ಮೌಲ್ಯಾಧರಿತ ಶಿಕ್ಷಣ ನೀಡಿದಲ್ಲಿ ವಿದ್ಯಾರ್ಥಿಗಳು ಸಮಾಜದಲ್ಲಿ ಸದೃಢ ವ್ಯಕ್ತಿಗಳಾಗಿ ಮೂಡಿಬರಲು ಸಾಧ್ಯ. `ಸಮೃದ್ಧ ಬದುಕಿಗಾಗಿ ಪರಿಪೂರ್ಣ ಶಿಕ್ಷಣ’ ಎಂಬ ಧ್ಯೇಯ ವಾಕ್ಯದಡಿ ಬೆಥನಿ ವಿದ್ಯಾ ಸಂಸ್ಥೆಯು ಗುಣ ಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತ ಬಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಪರಿಪೂರ್ಣ ಸೇವೆಗೈಯುತ್ತಿರುವ ಹೋಲಿ ಫ್ಯಾಮಿಲಿ ಶಾಲೆ ಇದೀಗ ವಜ್ರ ಮಹೋತ್ಸವ ಆಚರಿಸುತ್ತಿರುವುದು ಸಂಸತದ ಸಂಗತಿ ಎಂದರು.

ಬಜ್ಪೆ ಚರ್ಚ್ನ ಧರ್ಮಗುರು ಫಾ. ಅನಿಲ್ ಲೋಬೊ ಆಶೀರ್ವಚನ ನೀಡಿದರು. ರಾಯನ್ ಇಂಟರ್‌ನ್ಯಾಶನಲ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕಿ ಗ್ರೇಸ್ ಪಿಂಟೊ ಅವರ ಪರವಾಗಿ ಅವಿಟಾ ಡಿ’ಸೋಜ, ಸಿಮನ್ಸ್ ಗನ್ ಹೌಸ್‌ನ ಮಾಲಕ ರಾಯ್ ಪ್ರಕಾಶ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ರಾಜಲಕ್ಷಿö್ಮÃ, ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೊ, ಸ್ಥಳೀಯ ನಜ್ರತ್ ಕಾನ್ವೆಂಟ್‌ನ ಸುಪೀರಿಯರ್ ಸಿಸ್ಟರ್ ಫ್ಲೋರಿನ್ ಜ್ಯೋತಿ ಶುಭ ಹಾರೈಸಿದರು.

ದಕ್ಷಿಣ ಭಾರತ ವಲಯ ಮಟ್ಟದ ಶಾರ್ಟ್ ಗನ್ ಟ್ರಾಪ್ ಶೂಟಿಂಗ್ ಸ್ಪರ್ಧಾ ಕೂಟದಲ್ಲಿ ಸತತ ೩ ಬಾರಿ ಚಿನ್ನದ ಪದಕ ವಿಜೇತ ಸಾಮ್ಯುವೆಲ್ ಸಿಮನ್ಸ್, ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ೯ ಮಂದಿ ಶಿಕ್ಷಕರು ಹಾಗೂ ದಾನಿಗಳ ಗೌರವಿಸಲಾಯಿತು. ಬೆಥನಿ ಪ್ರಾಂತ್ಯದ ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ ಅಂತರ್ ಶಾಲಾ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಎಂ. ಕೆ. ಅಶ್ರಫ್ ಉಪಸ್ಥಿತರಿದ್ದರು.
ಶಾಲಾ ಸಂಚಾಲಕಿ ಸಿಸ್ಟರ್ ಪ್ಲಾವಿಯಾ ವಿಲ್ಮಾ ಪ್ರಸ್ತಾವಿಕ ಮಾತನ್ನಾಡಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸ್ಸಿ ಪ್ರೀಮಾ ಸ್ವಾಗತಿಸಿದರು. ಗಣಿತ ಶಿಕ್ಷಕ ವಾಸುದೇವ ರಾವ್ ಕುಡುಪು ನಿರೂಪಿಸಿದರು. ಕನ್ನಡ ಶಿಕ್ಷಕಿ ಲಿಲ್ಲಿ ಮಿನೇಜಸ್ ವಂದಿಸಿದರು. ಶಿಕ್ಷಕರಾದ ಪ್ರಶಾಂತ್, ಯಶೋದಾ, ಧನ್ಯಾ, ನಯನಾ, ಗೀತಾಂಬಾ, ಶ್ರೀಜಾ ಹಾಗೂ ರೇಣುಕಾ ಸಹಕರಿಸಿದರು.