ಶಾಂತಿಭಂಗದ ನೆಪದಲ್ಲಿ ನೋಟೀಸ್: ವಿಟ್ಲ ಪೊಲೀಸರ ವಿರುದ್ದ ಹಿ.ಜಾ.ವೇ.ಆಕ್ರೋಶ
ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗೋ,ಮರಳು ಸಾಗಟ,ಡ್ರಗ್ಸ್,ಗಾಂಜಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಇದನ್ನು ಮಟ್ಟ ಹಾಕಬೇಕಾದ ವಿಟ್ಲ ಠಾಣೆಯ ಪೊಲೀಸ್ ಅಧಿಕಾರಿಗಳು ಸಮಾಜಕ್ಕಾಗಿ ದುಡಿಯುವ ಹಿ.ಜಾ.ವೇ.ಸಹಿತ ಪರಿವಾರ ಸಂಘಟನೆಯ ಕಾರ್ಯಕರ್ತರನ್ನು ಗುರುತಿಸಿ ಸಾರ್ವಜನಿಕ ಶಾಂತಿಭಂಗದ ನೆಪದಲ್ಲಿ ನೋಟೀಸ್ ನೀಡಿ ಅವರ ಮನೋಸ್ಥರ್ಯವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿದ್ದು,ಪೊಲೀಸರ ಈ ನೀತಿಯನ್ನು ಹಿ.ಜಾ.ವೇ.ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹಿ.ಜಾ.ವೇ.ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಸಂಚಾಲಕ ನರಸಿಂಹ ಮಾಣಿ ಅವರು ಕಾನೂನು ಬಾಹಿರ,ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ವಿರುದ್ಧ ನೋಟೀಸ್ ,ಕಾನೂನು ಕ್ರಮ ಕೈಗೊಳ್ಳುವ ಧಮ್ ಇಲ್ಲದ ವಿಟ್ಲ ಠಾಣೆಯ ಅಧಿಕಾರಿಗಳು ಸಂಘಪರಿವಾರದ ಕಾರ್ಯಕರ್ತರನ್ನು ಗುರುತಿಸಿ ವಿನಾಕಾರಣ ನೋಟೀಸ್ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಕೇರಳಗಡಿಭಾಗದ ಮೂಲಕ ವಿಟ್ಲ ಪರಿಸರಕ್ಕೆ ರಾಜಾರೋಷವಾಗಿ ಅಕ್ರಮ ಗೋ,ಮರಳು ಸಾಗಾಟ,ಡ್ರಗ್ಸ್,ಗಾಂಜಾ ದಂಧೆ ನಡೆಯುತ್ತಿದೆ.ಈ ಬಗ್ಗೆ ಸಂಘಟನೆಯ ಕಾರ್ಯಕರ್ತರು ಮಾಹಿತಿ ನೀಡಿದರೂ,ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಇಂತಹ ದಂಧೆಕೋರರ ವಿರುದ್ದ ಕೇಸು,ಗೂಂಡಾಕಾಯ್ದೆ ದಾಖಲಿಸುವುದು ಇಲ್ಲ,ಯಾವುದೇ ಕಾನೂನು ಕ್ರಮಕ್ಕು ಮುಂದಾಗುತ್ತಿಲ್ಲ , ಆದರೆ ಮಾಹಿತಿ ನೀಡಿದವರ ಮೇಲೆಯೇ ಎದುರುದಾರನಿಂದ ದೂರು ದಾಖಲಿಸಿಕೊಳ್ಳುವ ಹುನ್ನಾರವನ್ನು ಪೊಲೀಸರು ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಮೀನಿಗೆ ಸಂಬಂಧಿಸಿ ವಯಕ್ತಿಕ ವಿಚಾರಗಳಿಗೆ ನಡೆದಂತಹ ಕೆಲ ಪ್ರಕರಣದ ಜೊತೆಗೆ ಸಂಘಪರಿವಾರದ ಸಂಘಟನೆಯ ಕಾರ್ಯಕರ್ತರೋರ್ವರಿಗೆ ಶಾಂತಿಭಂಗದ ಹೆಸರಿನಲ್ಲಿ ಪೊಲೀಸರು ನೋಟೀಸು ಜಾರಿಗೊಳಿಸಿರುವುದು ಖಂಡನೀಯವಾಗಿದೆ.
ಇಂತಹ ನೋಟೀಸಿಗೆ ಸಂಘಪರಿವಾರದ ಕಾರ್ಯಕರ್ತರು ಬಾಂಡ್ ನೀಡದೇ ಕಾನೂನಿನ ಮೂಲಕವೇ ಹೋರಾಟ ನಡೆಸುತ್ತವೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಮಾಜಕ್ಕಾಗಿ ದುಡಿಯುವ ಸಂಘಪರಿವಾರ ಸಂಘಟನೆಯ ಕಾರ್ಯಕರ್ತರನ್ನು ಗುರುತಿಸಿ ಗಡಿಪಾರು,ಗೂಂಡಾಕಾಯ್ದೆ,ಶಾಂತಿಭಂಗದನೆಪದಲ್ಲಿ ವಿನಾ ಕಾರಣ ನೋಟೀಸ್ ಜಾರಿಗೊಳಿಸುವ ಕಾರ್ಯ ಪೊಲೀಸ್ ಇಲಾಖೆಯಿಂದಾಗುತ್ತಿದ್ದು,ಪೊಲೀಸರು ನೋಟೀಸ್ ನೀಡುವ ನೆಪದಲ್ಲಿ ರಾತ್ರಿ ಹೊತ್ತು ಮನೆಬಾಗಿಲು ಬಡಿಯುವುದು, ಕಿರುಕುಳ ನೀಡಿದರೆ ಹಿ.ಜಾ.ವೇ.ಇದರ ವಿರುದ್ದು ತೀವ್ರ ಹೋರಾಟ ನಡೆಸಲಿದೆ.ಈ ಸಂದರ್ಭ ಉಂಟಾಗಬಹುದಾದ ಅನಾಹುತಕ್ಕೆ ಜಿಲ್ಲಾ ಪೊಲೀಸ್ ,ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿ.ಜಾ.ವೇ.ಗ್ರಾಮಾಂತರ ಜಿಲ್ಲಾ ಸಹಸಂಚಾಲಕ ತಿರುಲೇಶ್ ಬೆಳ್ಳೂರು,ನ್ಯಾಯಾವಾದಿ ರಾಜೇಶ್ ಬೊಳ್ಳುಕಲ್ಲು,ಪದಾಧಿಕಾರಿಗಳಾದ ಸಮಿತ್ ರಾಜ್ ಧರೆಗುಡ್ಡೆ,ಪ್ರಶಾಂತ್ ಕೆಂಪುಗುಡ್ಡೆ ಉಪಸ್ಥಿತರಿದ್ದರು.