ಉಡುಪಿ: ನಿಂತಿದ್ದ ಲಾರಿಗೆ ಟೂರಿಸ್ಟ್ ಬಸ್ ಡಿಕ್ಕಿ; 17 ಮಂದಿಗೆ ಗಾಯ
ಉಡುಪಿ: ಇಂದು ಮುಂಜಾನೆ ಉಡುಪಿ ತಾಲೂಕಿನ ಉದ್ಯಾವರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಮಿನಿ ಬಸ್ ಮತ್ತು ಲಾರಿ ಮಧ್ಯೆ ಸಂಭವಿಸಿದ ಈ ರಸ್ತೆ ಅಪಘಾತದಲ್ಲಿ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಹೊರಟಿದ್ದ ತಮಿಳುನಾಡಿನ 17 ಮಂದಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ.
ಮಂಗಳೂರು ಕಡೆಯಿಂದ ಕೊಲ್ಲೂರು ದೇವಾಲಯಕ್ಕೆ ಹೋಗುತ್ತಿದ್ದ ಮಿನಿ ಬಸ್ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಟೂರಿಸ್ಟ್ ವಾಹನ ಜಖಂಗೊಂಡಿದ್ದು, ಅಪಘಾತದಲ್ಲಿ 17 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳ ಪೈಕಿ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.