ಬಂಟ್ವಾಳ: ವೆಂಕಟರಮಣ ಸ್ವಾಮಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಬಿಸಿಯೂಟ

ಬಂಟ್ವಾಳ: ವೆಂಕಟರಮಣ ಸ್ವಾಮಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಬಿಸಿಯೂಟ ಯೋಜನೆಗೆ ಬುಧವಾರ (ಅ.23) ಚಾಲನೆ. ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ ವಿದ್ಯಾಗಿರಿ ಬಂಟ್ವಾಳ ಇದರ ವತಿಯಿಂದ ಯೋಜನೆಯನ್ನು ನೀಡಲಾಗಿದೆ. ಸಂಘದ ಸದಸ್ಯ ರಾಘವೇಂದ್ರ ಕೂಡಿಗೆ ಶೆಣೈ ಅವರು ತನ್ನ ತಾಯಿ ಸವಿತಾ ಕೂಡಿಗೆ ಶೆಣೈ ಅವರ ಸ್ಮರಣಾರ್ಥ ಆರಂಭಿಸಲಾದ ಈ ಯೋಜನೆಗೆ ಜೆಸಿಐ ವಲಯ ತರಬೇತುದಾರ,ಪತ್ರಕರ್ತ ಸಂದೀಪ್ ಸಾಲ್ಯಾನ್ ಅವರು ಫಲಾನುಭವಿ ವಿದ್ಯಾರ್ಥಿಗಳಿಗೆ ಕಾರ್ಡ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂದೀಪ್ ಸಾಲ್ಯಾನ್, ದೂರದೂರಿನಿಂದ ಬರುವ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಈ ಯೋಜನೆ ಜಾರಿಗೊಳಿಸಿರುವುದು ಅಭಿನಂದನೀಯ, ವಿದ್ಯಾರ್ಥಿಗಳು ಇದರ ಮಹತ್ವವನ್ನು ಅರಿತುಕೊಂಡು ಯೋಜನೆ ಯಶಸ್ವಿಯಾಗಿ ಸಾಕಾರಗೊಳ್ಳಲು ಸಹಕರಿಸುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಸುಯೋಗವರ್ಧನ್ ಡಿ.ಎಂ. ಅವರು ಮಾತನಾಡಿ ಕೋವಿಡ್ ಬಳಿಕ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಇದೀಗ ಮತ್ತೆ ಆಡಳಿತ ಮಂಡಳಿಯ ತೀರ್ಮಾನದಂತೆ ಮರು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ. ಸ್ವಾಗತಿಸಿದರು, ಕನ್ನಡ ಪ್ರಾಧ್ಯಾಪಕ ಮನೋಹರ ಶಾಂತಪ್ಪ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



