ಕೈಕಂಬ: ಶುಕ್ರವಾರ ರಾತ್ರಿ ದತ್ತಮಾಲಾಧಾರಿಗಳ ಮೇಲೆ ಮತಾಂಧರು ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಹಾಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಹಿಂದೂ ಸಂಘಟನೆಗಳ ವತಿಯಿಂದ ವಾಮಂಜೂರಿನಲ್ಲಿ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ವಾಮಂಜೂರಿನ ಜಂಕ್ಷನ್ನಲ್ಲಿ ಕುಳಿತಿರುವ ಪ್ರತಿಭಟನಾಕಾರರು ರಸ್ತೆಯನ್ನು ಬಂದ್ ಮಾಡಿ ಹಲ್ಲೆಕೋರರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ ದುಷ್ಕರ್ಮಿಗಳ ದಾಳಿಯನ್ನು ಖಂಡಿಸಿ ಡಿ.8ರ ಸೋಮವಾರ ಜಿಲ್ಲಾಬಂದ್ಗೆ ಕರೆ ನೀಡಲಾಗಿದೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದ ಸತ್ಯಜಿತ್ ಸುರತ್ಕಲ್ ದತ್ತ ಮಾಲಧಾರಿಗಳ ಮೇಲೆ ಹಲ್ಲೆ ನಡೆಸಿರುವುದು ಅಕ್ಷ್ಯಮ್ಯ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸೋಮವಾರದೊಳಗೆ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಸೋಮವಾರ ದ.ಕ. ಜಿಲ್ಲಾ ಬಂದ್ ನಡೆಸಿ ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ನಂತರ ಮಾತಾಡಿದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತಾಡಿ, ಹಿಂದೂಗಳ ಮೇಲೆ ಯಾವುದೇ ರಕ್ಷಣೆ ಇಲ್ಲ. ಮಹಿಳೆಯರು ಮಾತೆಯರು ಬೀದಿಗೆ ಇಳಿಯದಂತೆ ಆಗಿದೆ. ಪೊಲೀಸರು ದತ್ತಮಾಲಾಧಾರಿಗಳ ಮೇಲೆ ಯಾವುದೇ ರಕ್ಷಣೆ ನೀಡದೆ ಹಿಂದೂ-ಮುಸ್ಲಿಂ ತುಷ್ಟೀಕರಣ ನೀತಿ ಅನುಸರಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಹಿಂದೂ ಮಹಾಸಭದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ, ಹಿಂದೂ ಸಂಘಟನೆಯ ಜಿತೇಂದ್ರ ಕೊಟ್ಟಾರಿ ಹೀಗೆ ಹತ್ತು ಹಲವಾರು ಮಂದಿ ಭಾಗವಹಿಸಿದ್ದಾರೆ.
ಪ್ರತಿಭಟನೆಯಿಂದ ರಸ್ತೆ ಸಂಚಾರ ಸ್ವಲ್ಪ ಸಮಯ ಸ್ಥಗಿತಗೊಂಡಿತ್ತು. ಯಾವುದೇ ಕೋಮುಭಾವನೆ ಹರಡದಂತೆ ಪೊಲೀಸರು ಪ್ರದೇಶದಲ್ಲಿ ಬಿಗಿಭದ್ರತೆ ಕೈಕೊಂಡಿದ್ದಾರೆ.







