ಬಂಟ್ವಾಳ ದಸರಾಕ್ಕೆ ಅದ್ದೂರಿಯ ತೆರೆ
ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ವಠಾರದಲ್ಲಿ ಶ್ರೀಗಣೇಶೋತ್ಸವ ಮತ್ತು ಶ್ರೀಶಾರದೋತ್ಸವ ಸಮಿತಿ ವತಿಯಿಂದ ನಡೆದ ಶಾರದಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ 57 ನೇ ವರ್ಷದ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ಸೋಮವಾರ ರಾತ್ರಿ ಸಂಭ್ರಮೋಲ್ಲಾಸಗಳಿಂದ ನಡೆಯಿತು.
ಅ. 8ರಿಂದ ಪೂಜಿಸಲ್ಪಟ್ಟ ಶಾರದಾ ಮಾತೆಯನ್ನು ಪೂರ್ಣಾಲಂಕಾರಗೊಳಿಸಿ, ದೇವಸ್ಥಾನದ ಹೊರಭಾಗದಲ್ಲಿ ಕೂರಿಸಿ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಸಹಸ್ರಾರು ಭಕ್ತರು ಶಾರದಾ ಮಾತೆಯನ್ನು ಕಣ್ತುಂಬಿಕೊಂಡು ಪ್ರಸಾದ ಸ್ವೀಕರಿಸಿದರು.
ಶ್ರೀಶಾರದ ಮಾತೆಯ ಶೋಭಾಯಾತ್ರೆಗೆ ಮುನ್ನ ದೇವಳದ ಮುಂಭಾಗದ ವೇದಿಕೆಯಲ್ಲಿ ಹುಲಿವೇಷಗಳ ಸಹಿತ ವಿವಿಧ ವೇಷಧಾರಿಗಳ ಪ್ರತಿಭಾ ಪ್ರದರ್ಶನವು ನಡೆಯಿತು.
ಅಬ್ಬರದ ಗುಡುಗು ಸಹಿತ ಮಳೆ:
ಶಾರದ ಮಾತೆಯ ವಿಗ್ರಹವನ್ನುದೇವಳದ ಹೊರಭಾಗದಲ್ಲಿ ಕೂರಿಸಿದ ಕೆಲವೇ ಹೊತ್ತಿನಲ್ಲಿ ಬಂಟ್ವಾಳದಾದ್ಯಂತ ಗುಡುಗಿನ ಅಬ್ಬರದೊಂದಿಗೆ ಮಳೆಯು ಧಾರಕಾರವಾಗಿ ಸುರಿಯಿತು.ರಾತ್ರಿ 7.30ರ ಹೊತ್ತಿಗೆ ಆರಂಭವಾದ ಗುಡುಗು ಸಹಿತ ಬಿರುಸಿನ ಮಳೆ ಸುಮಾರು ಎರಡು ತಾಸುಗಳ ಕಾಲ ಒಂದೇ ಸವನೆ ಸುರಿದಿತ್ತು.ಈ ಸಂದರ್ಭದಲ್ಲಿಗ್ರಾಮೀಣ ಭಾಗದಿಂದ ಶಾರದ ಮಾತೆ ಹಾಗೂ ವೇಷಧಾರಿಗಳ ಪ್ರತಿಭಾ ಪ್ರದರ್ಶನ ವೀಕ್ಷಿಸಲು ಬಂದಿದ್ದ ಭಕ್ತರು ನಿರಾಸೆಯಿಂದ ತಮ್ಮ ಮನೆಯತ್ತ ತೆರಳಿದರು.ಹುಲಿ,ಶಾರ್ದೂಲಗಳು ಸೇರಿದಂತೆ ವಿವಿಧ ವೇಷಗಳು ಮಳೆಯಿಂದ ರಕ್ಷಿಸಿಕೊಳ್ಳಲು ಅಂಗಡಿಜಗಲಿ, ಮನೆಯೊಳಗೆ ಸೇರಿದವು.ಸುಮಾರು 9.30 ರ ನಂತರ ಮಳೆ ಸಹಿತ ಗುಡುಗು ಸಂಪೂರ್ಣ ಸ್ಥಗಿತಗೊಂಡಿದ್ದು,ಅಂಗಡಿ,ಮನೆಯೊಳಗೆ ಸೇರಿದ್ದ ವೇಷಗಳು ರಸ್ತೆಗಿಳಿದವಲ್ಲದೆ ದೇವಸ್ಥಾನದ ಶಾರದೆಯ ಪಕ್ಕ ಹಾಕಲಾಗಿದ್ದ ವೇದಿಕೆಯಲ್ಲಿ ಪ್ರದರ್ಶನ ಆರಂಭಗೊಂಡಿತು.
ಬಳಿಕ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆಯು ಉತ್ಸವ ಸ್ಥಾನದಿಂದ ಹೊರಟು ಬೈಪಾಸ್ ಶ್ರೀರಾಮ ಭಜನಾ ಮಂದಿರದವೆರೆಗೆ ತೆರಳಿ ಅಲ್ಲಿಂದ ಅದೇರಸ್ತೆಯಾಗಿ ವಾಪಸಾಗಿ ಹನುಮಾನ್ ದೇವಸ್ಥಾನದವರೆಗೂ ಸಾಗಿತ. ಅಲ್ಲಿಂದ ವಾಪಾಸ್ ಬಂದು ತ್ಯಾಗರಾಜ ರಸ್ತೆಯ ಮೂಲಕ ವೆಂಕಟರಮಣ ದೇವಳದ ಮುಂಭಾಗ ಹರಿಯುವ ನೇತ್ರಾವತಿ ನದಿಯಲ್ಲಿ ವಿಗ್ರಹದ ಜಲಸ್ತಂಭನ ನಡೆಸಲಾಯಿತು.
ಸಹಸ್ರಾರು ಭಕ್ತರು ಶೋಭಾಯಾತ್ರೆಯ ವೈಭವವನ್ನು ವೀಕ್ಷಿಸಿದರು. ವಿದ್ಯುದ್ದೀಪಲಂಕೃತವಾದ ಪ್ರಭಾವಳಿಯನ್ನೊಳಗೊಂಡ ಶ್ರೀಶಾರದ ಮಾತೆಯ ವಿಗ್ರಹವನ್ನು ಭಜಕರು ಭುಜ ಸೇವೆಯ ಮೂಲಕವೇ ಶೋಭಾಯಾತ್ರೆಯಲ್ಲಿ ಸಾಗಿದರು.
ಹುಲಿವೇಷಗಳು ,ಶಾರ್ದೂಲಗಳ ಕುಣಿತದ ಅಬ್ಬರ ವಿವಿಧ ಸಂಘಸಂಸ್ಥೆಗಳ ಮನಮೋಹಕವಾದ ಸ್ತಬ್ದಚಿತ್ರ, ಟ್ಯಾಬೋ,ಚೆಂಡೆ ವಾದನ,ನಾಸಿಕ್ ಬ್ಯಾಂಡ್,ಮಕ್ಕಳ ಕುಣಿತ ಭಜನೆ,ವಿವಿಧ ವದ್ಯಾಗೋಷ್ಠಿ ನೆರೆದ ಭಕ್ತರ ಗಮನ ಸೆಳೆಯಿತು.